ಮೋಟರ್ ಪಂಪ್ ಹಾಗೂ ಕೇಬಲ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ಚಿತ್ತಾಪುರ ಪೊಲೀಸರ ಕಾರ್ಯಾಚರಣೆ; ₹60 ಸಾವಿರ ಮೌಲ್ಯದ ಮೂರು ಮೋಟರ್ ಪಂಪ್ಗಳ ವಶ

ಜಿಲ್ಲೆಯ ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೋಟರ್ ಪಂಪ್ ಹಾಗೂ ಕೇಬಲ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳವಾಗಿದ್ದ ಮೂರು ಮೋಟರ್ ಪಂಪ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಚಿತ್ತಾಪುರದ ಆಶ್ರಯ ಕಾಲೋನಿ ನಿವಾಸಿಗಳಾದ ಮಂಜುನಾಥ ಅಲಿಯಾಸ್ ಆಂಜನೇಯ (30) ಹಾಗೂ ಭೀಮಣ್ಣ (38) ಎಂದು ಗುರುತಿಸಲಾಗಿದೆ.
ಚಿತ್ತಾಪುರ ಪಟ್ಟಣದ ಸಂತೋಷ ನಗರ ನಿವಾಸಿ ಸೈಯದ್ ನಾಸೀರ್ ಅವರ ಪಾಲಿಷ್ ಯಂತ್ರ ಘಟಕದಿಂದ ಸುಮಾರು ₹60 ಸಾವಿರ ಮೌಲ್ಯದ ಮೂರು ಮೋಟರ್ ಪಂಪ್ಗಳನ್ನು ಜುಲೈ 2ರಂದು ಕಳವು ಮಾಡಲಾಗಿತ್ತು. ಈ ಕುರಿತು ದಾಖಲಾದ ದೂರಿನ ಆಧಾರದ ಮೇಲೆ ಚಿತ್ತಾಪುರ ಪೊಲೀಸರು ತನಿಖೆ ಕೈಗೊಂಡಿದ್ದರು.
ಪೊಲೀಸ್ ಉಪನಿರೀಕ್ಷಕ ಮಂಜುನಾಥರೆಡ್ಡಿ ಅವರ ನೇತೃತ್ವದಲ್ಲಿ ಎಎಸ್ಐ ಬಸವರಾಜ್ ಹಾಗೂ ಸಿಬ್ಬಂದಿಗಳಾದ ಅಜರುದ್ದೀನ್, ಅನಿಲ್, ಅಯ್ಯಣ್ಣ, ದತ್ತಾತ್ರೇಯ, ಮಂಜುನಾಥ ಮತ್ತು ಸಿದ್ಧರಾಮೇಶ್ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತರಿಂದ ಕಳವಾಗಿದ್ದ ಮೂರು ಮೋಟರ್ ಪಂಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವನ್ನು ಶೀಘ್ರವೇ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಶ್ಲಾಘಿಸಿದ್ದಾರೆ.



