ಅಪರಾಧ

10 ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ ಭೇದಿಸಿದ ಆಳಂದ್ ಪೊಲೀಸರು; ಇಬ್ಬರು ಆರೋಪಿಗಳ ಬಂಧನ

₹27,500 ಮೌಲ್ಯದ ಸಿಲಿಂಡರ್‌ಗಳ ವಶ; ಪಿಕಪ್ ವಾಹನದಿಂದ ಕಳವು ಮಾಡಿದ್ದ ಖದೀಮರು ಸೆರೆ

ಜಿಲ್ಲೆಯ ಆಳಂದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ₹27,500 ಮೌಲ್ಯದ 10 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಖಜೂರಿ ಗ್ರಾಮದ ನಿವಾಸಿಗಳಾದ ಪ್ರದೀಪ್ ವೈಜನಾಥ ಕೊರೆ ಹಾಗೂ ಪ್ರಶಾಂತ್ ಕರಬಸಪ್ಪ ಕೋರೆ ಎಂದು ಗುರುತಿಸಲಾಗಿದೆ.

ಖಜೂರಿ ಗ್ರಾಮದ ವಿವೇಕಾನಂದ ಸರ್ಕಲ್‌ನಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಅವರಿಂದ 14 ಕೆ.ಜಿ. ಸಾಮರ್ಥ್ಯದ ಐದು ತುಂಬಿದ ಹಾಗೂ ಐದು ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಖಜೂರಿಯ ನಿವಾಸಿ ವೈಜನಾಥ ಗುರುಬಸಪ್ಪ ವಾಡೆ ಅವರು ತಮ್ಮ ಕೋರಣೇಶ್ವರ ಇಂಡಿಯನ್ ಆಯಿಲ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನದಲ್ಲಿದ್ದ 10 ಗ್ಯಾಸ್ ಸಿಲಿಂಡರ್‌ಗಳು ಕಳವಾಗಿರುವ ಕುರಿತು ಜುಲೈ 5ರಂದು ಆಳಂದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ಪೊಲೀಸ್ ಇನ್‌ಸ್ಪೆಕ್ಟರ್ ಶರಣಬಸಪ್ಪ ಕೋಡ್ಲಾ ಅವರ ನೇತೃತ್ವದಲ್ಲಿ ಪಿಎಸ್‌ಐ ಭನ್ನಪ್ಪ ಹಾಗೂ ಸಿಬ್ಬಂದಿಗಳಾದ ಮಹಿಬೂಬ್ ಶೇಖ್, ಚಂದ್ರಶೇಖರ್, ಜಾಕೀರ್, ಸಚಿನ್, ಸಿದ್ಧರಾಮ್, ಶಿವಲಿಂಗ, ಮೌಲಾಲಿ ಮತ್ತು ಮಹಾಂತೇಶ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಶ್ಲಾಘಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button