ವಾರ್ತಾ ಇಲಾಖೆಯ ಹಿರಿಯ ವಾಹನ ಚಾಲಕ ದೇವಿಂದ್ರಪ್ಪಗೆ ಭಾವಪೂರ್ಣ ಬೀಳ್ಕೊಡುಗೆ
24 ವರ್ಷಗಳ ನಿಷ್ಠಾವಂತ ಸೇವೆಗೆ ಗೌರವ; ಇಲಾಖೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಗಣ್ಯರು.

ಕಲಬುರಗಿ, ಜು. 31: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ವಾಹನ ಚಾಲಕ ದೇವಿಂದ್ರ ಸಾಯಬಣ್ಣ (ದೇವಿಂದ್ರಪ್ಪ) ಅವರ ವಯೋನಿವೃತ್ತಿ ಅಂಗವಾಗಿ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಅಪ್ಪಾರಾವ ಅಕ್ಕೋಣಿ, ವಾರ್ತಾ ಇಲಾಖೆಯಲ್ಲಿ ತಾವು ಸಲ್ಲಿಸಿದ 27 ವರ್ಷಗಳ ಸೇವೆ ಅತ್ಯಂತ ಸ್ಮರಣೀಯವಾಗಿದೆ. ಈ ಇಲಾಖೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿದ ತಾಯಿಯಂತಿದ್ದು, ಬಜೆಟ್ ದೃಷ್ಟಿಯಿಂದ ಸಣ್ಣದಾಗಿ ಕಂಡರೂ ಸಮಾಜದಲ್ಲಿ ಅದರ ಪ್ರಭಾವ ಅಪಾರವಾಗಿದೆ ಎಂದು ಹೇಳಿದರು. ಇಲಾಖೆಯಲ್ಲಿ ಡಿ ದರ್ಜೆ ನೌಕರರಿಂದ ಹಿಡಿದು ಉನ್ನತ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳವರೆಗೆ ಎಲ್ಲರೂ ಒಂದೇ ಕುಟುಂಬದಂತೆ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.
ನಿವೃತ್ತ ಉಪನಿರ್ದೇಶಕ ಬಸವರಾಜ ಪಾರಾ ಮಾತನಾಡಿ, 24 ವರ್ಷಗಳ ಕಾಲ ನಿಷ್ಠೆ, ಶಿಸ್ತು ಹಾಗೂ ಸಮಯಪಾಲನೆಯೊಂದಿಗೆ ಸೇವೆ ಸಲ್ಲಿಸಿದ ದೇವಿಂದ್ರಪ್ಪ ಅವರು ಸಿಬ್ಬಂದಿ ಕೊರತೆ ಮತ್ತು ಒತ್ತಡದ ನಡುವೆಯೂ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿದ್ದಾರೆ. ಇಲಾಖೆಯ ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿನಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದರು.
ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಮಾತನಾಡಿ, ಕಚೇರಿಯ ದೀರ್ಘ ಪ್ರಯಾಣಗಳು ಹಾಗೂ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಯಶಸ್ಸಿನಲ್ಲಿ ವಾಹನ ಚಾಲಕರ ಸಮಯಪ್ರಜ್ಞೆ ಮತ್ತು ಅನುಭವ ಅತ್ಯಂತ ಮುಖ್ಯವಾಗಿದೆ. ದೇವಿಂದ್ರಪ್ಪ ಅವರ ವೃತ್ತಿಪರತೆ ಮತ್ತು ಕರ್ತವ್ಯನಿಷ್ಠೆ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಕಲಬುರಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯಡ್ರಾಮಿ ಮಾತನಾಡಿ, ನೂರಾರು ಪತ್ರಕರ್ತರ ಸುರಕ್ಷಿತ ಪ್ರಯಾಣ, ಸಮಯ ನಿರ್ವಹಣೆ ಹಾಗೂ ವಿವಿಧ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಯಲ್ಲಿ ದೇವಿಂದ್ರಪ್ಪ ಅವರ ಸೇವೆ ಅನನ್ಯವಾಗಿದೆ. ಸಚಿವರು ಮತ್ತು ಗಣ್ಯರ ಕಾರ್ಯಕ್ರಮಗಳ ವೇಳಾಪಟ್ಟಿಗೆ ಅನುಗುಣವಾಗಿ ಪ್ರಯಾಣವನ್ನು ಸಮರ್ಪಕವಾಗಿ ನಿರ್ವಹಿಸುವ ಅವರ ಅನುಭವ ಇಲಾಖೆಗೆ ಹಾಗೂ ಪತ್ರಕರ್ತರಿಗೆ ಸದಾ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ. ಚಂದ್ರಕಾಂತ, ನೃಪತುಂಗ ದಿನಪತ್ರಿಕೆಯ ಸಂಪಾದಕ ಶಿವರಾಯ ದೊಡ್ಡಮನಿ, ವಾರ್ತಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ದಿನಪತ್ರಿಕೆಗಳ ಸಂಪಾದಕರು ಹಾಗೂ ಜಿಲ್ಲಾ ವರದಿಗಾರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ದೇವಿಂದ್ರಪ್ಪ ಹಾಗೂ ಅವರ ಪತ್ನಿಯನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ, ಅವರ ಆರೋಗ್ಯಕರ ಹಾಗೂ ಸುಖಕರ ನಿವೃತ್ತ ಜೀವನಕ್ಕೆ ಶುಭ ಹಾರೈಸಲಾಯಿತು.



