ಶಿಕ್ಷಣ

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಮೂವರಿಗೆ ಪಿಎಚ್‌ಡಿ ಪದವಿ ಪ್ರದಾನ

ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಹಾಗೂ ವಿದೇಶಿ ಭಾಷಾ ವಿಭಾಗದ ಸಂಶೋಧಕರಿಗೆ ಶೈಕ್ಷಣಿಕ ಗೌರವ

ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯವು ಮೂರು ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ.

ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಕು. ಶ್ವೇತಾ ಅವರು “ಸಮುದ್ರದ ಶಂಕು ಬಸವನ ಹುಳಗಳಿಂದ ದೊರೆಯುವ ಸಿಸ್ಟೀನ್ ಸಮೃದ್ಧ ಪುನರಾವರ್ತಿತ ಸಂಯುಕ್ತಗಳ ಅಧ್ಯಯನ” ವಿಷಯದ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ಪ್ರೊ. ಕೊಣಕಲ್ಲು ಹನುಮೇಗೌಡ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

ಗಣಕ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ವೆಂಕಟ ಬಾಬುರಾವ್ ಅವರು “ದ್ವಿಭಾಷಿಕ ದೃಶ್ಯ ಪಠ್ಯದ ದಿಕ್ಕು, ಭಾಷೆ ಗುರುತಿಸುವಿಕೆ ಹಾಗೂ ನೈಸರ್ಗಿಕ ದೃಶ್ಯಗಳಲ್ಲಿ ಪದಗಳು ಮತ್ತು ಅಕ್ಷರಗಳ ಗುರುತಿಸುವಿಕೆ” ವಿಷಯದ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರ ಸಂಶೋಧನೆಗೆ ಡಾ. ಗುರುರಾಜ ಮುಕರಂಬಿ ಅವರು ಮಾರ್ಗದರ್ಶಕರಾಗಿದ್ದರು.

ವಿದೇಶಿ ಭಾಷಾ ಅಧ್ಯಯನ ವಿಭಾಗದ ಅರೇಬಿಕ್ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಕು. ಬುಲ್ತಿ ಸರ್ಕಾರ್ ಅವರು “ಖಲೀಲ್ ಜಿಬ್ರಾನ್ ಅವರ ಆಯ್ದ ಕೃತಿಗಳಲ್ಲಿ ಜಾತ್ಯತೀತ ಮಾನವತಾವಾದ – ‘ಮುರಿದ ರೆಕ್ಕೆಗಳು’, ‘ಪ್ರವಾದಿ’, ‘ಹುಚ್ಚ’, ಹಾಗೂ ‘ಭೂಮಿಯ ದೇವರುಗಳು’ ಕೃತಿಗಳ ವಿಶೇಷ ಉಲ್ಲೇಖದೊಂದಿಗೆ” ವಿಷಯದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರಿಗೆ ಡಾ. ಇನಾಮುಲ್ ಅಜಾದ್ ಅವರು ಮಾರ್ಗದರ್ಶನ ನೀಡಿದ್ದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಡಾಕ್ಟರೇಟ್ ಪದವಿ ಪಡೆದ ಮೂವರು ಸಂಶೋಧಕರಿಗೆ ಹಾಗೂ ಅವರ ಮಾರ್ಗದರ್ಶಕರಿಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ಶೈಕ್ಷಣಿಕ ಮತ್ತು ವೃತ್ತಿ ಜೀವನದಲ್ಲಿಯೂ ಅವರು ಇನ್ನಷ್ಟು ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದರು.

Related Articles

Leave a Reply

Your email address will not be published. Required fields are marked *

Back to top button