ಕಲಬುರಗಿಯಲ್ಲಿ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ
ಜುಲೈ 28ರಿಂದ ಆಗಸ್ಟ್ 7ರವರೆಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳ ಆಯೋಜನೆ

ಕಲಬುರಗಿ, ಜು.20: ಆಶಾಢ ಮಾಸದ ಅಂಗವಾಗಿ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಉಜ್ಜಯಿನಿ ಪೀಠದ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ.
ನಗರದ ಸೊಗಸಕೇರಿ ಪ್ರದೇಶದ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜುಲೈ 28ರಂದು ಸಂಜೆ 7 ಗಂಟೆಗೆ ಶ್ರೀ ಗುರುಶಾಂತಲಿಂಗೇಶ್ವರರ ಪುರಾಣ ಪ್ರವಚನ ಆರಂಭವಾಗಿ ಆಗಸ್ಟ್ 6ರವರೆಗೆ ನಡೆಯಲಿದೆ. ಪುರಾಣ ಪ್ರವಚನವನ್ನು ಶಿವಲಿಂಗಯ್ಯ ಶಾಸ್ತ್ರಿ ಗರೂರ ಚೇತನ ಬೀದಿಮನಿ ನಡೆಸಲಿದ್ದು, ಮಹಾಂತಯ್ಯ ನಿಂಗದಳ್ಳಿ ಅವರು ಸಂಗೀತ ಸಹಕಾರ ನೀಡಲಿದ್ದಾರೆ.
ಆಗಸ್ಟ್ 3ರಿಂದ 7ರವರೆಗೆ ಪ್ರತಿದಿನ ರಾತ್ರಿ 8ರಿಂದ 10 ಗಂಟೆಯವರೆಗೆ ಶ್ರೀ ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.
ಕಡಗಂಚಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅನೇಕ ಶಿವಾಚಾರ್ಯರು, ಗಣ್ಯರು, ರಾಜಕೀಯ ಮುಖಂಡರು ಹಾಗೂ ಭಕ್ತರು ಭಾಗವಹಿಸಲಿದ್ದಾರೆ ಎಂದು ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದ್ದಾರೆ.



