
ಚಿತ್ತಾಪುರ, ನ. 2: ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಭಾರತದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಜಾಗತಿಕ ಡಾ. ಅಂಬೇಡ್ಕರ್ ಬೌದ್ಧ ಮಿಷನ್ ಅಮೆರಿಕದ ಕಾರ್ಯದರ್ಶಿ ಡಾ. ಶಾಕ್ಯ ಬೋಧಿಧಮ್ಮ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದ ಬುದ್ಧ ವಿಹಾರದ ಆವರಣದಲ್ಲಿ ನಡೆದ 70ನೇ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಮಾಜದಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬದಲಾವಣೆಗಳಾಗಬೇಕು. ಈ ಬದಲಾವಣೆ ಸಾಧ್ಯವಾಗಲು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಅಂಬೇಡ್ಕರ್ ಚಿಂತನೆಗಳ ಅಧ್ಯಯನ ಅಗತ್ಯ
ಜನರು ಮೂಢನಂಬಿಕೆಗಳಿಂದ ಹೊರಬಂದು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಪ್ರಸ್ತುತ ಪೀಳಿಗೆಗೆ ಸಾಮ್ರಾಟ ಅಶೋಕನ ತತ್ವಜ್ಞಾನವೂ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಪ್ರಬುದ್ಧ ರಾಷ್ಟ್ರ ನಿರ್ಮಾಣ ಸಾಧ್ಯ. ಸಮಾನತೆ, ಸಹೋದರತ್ವ ಹಾಗೂ ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಐದು ಲಕ್ಷ ಜನರ ಬೌದ್ಧ ಧಮ್ಮ ದೀಕ್ಷಾ ಸಮಾರಂಭ
ಚಿತ್ತಾಪುರ ತಾಲ್ಲೂಕಿನ ಸನ್ನತಿಯ ಕನಗನಹಳ್ಳಿಯಲ್ಲಿ ನವೆಂಬರ್ 1ರಂದು ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣದ ಆಶಯದೊಂದಿಗೆ ಹಾಗೂ 70ನೇ ಬೌದ್ಧ ಧಮ್ಮ ದೀಕ್ಷೆಯ ಪ್ರಯುಕ್ತ ಐದು ಲಕ್ಷ ಜನರ ಬೃಹತ್ ಬೌದ್ಧ ಧಮ್ಮ ದೀಕ್ಷಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಚಿತ್ತಾಪುರ ತಾಲ್ಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ಬೈಕ್ ರ್ಯಾಲಿ
ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆಗೆ ಪಟ್ಟಣದ ಯರಗಲ್ ಕ್ರಾಸ್ನಲ್ಲಿ ಸ್ವಾಗತ ಕೋರಲಾಯಿತು. ಬಳಿಕ ಯರಗಲ್ ಕ್ರಾಸ್ನಿಂದ ಹೊಳಿಕಟ್ಟಾ, ಕಪಡಾ ಬಜಾರ್, ಜನತಾ ಚೌಕ್, ಭುವನೇಶ್ವರಿ ವೃತ್ತ ಹಾಗೂ ಡಾ. ಅಂಬೇಡ್ಕರ್ ವೃತ್ತದ ಮೂಲಕ ಅಂಬೇಡ್ಕರ್ ನಗರದವರೆಗೆ ಬೈಕ್ ರ್ಯಾಲಿ ನಡೆಸಲಾಯಿತು.
ಅಮೆರಿಕ, ಆಸ್ಟ್ರೇಲಿಯಾ, ಕೊರಿಯಾ ಹಾಗೂ ಜಪಾನ್ ಸೇರಿದಂತೆ ವಿವಿಧ ದೇಶಗಳ ಬೌದ್ಧ ಭಿಕ್ಷುಗಳು ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀಕಾಂತ ಸಿಂಧೆ, ಬಸವರಾಜ್ ಬೆಣ್ಣೂರಕರ್, ಶಿವರುದ್ರಪ್ಪ ಬೆಣ್ಣಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಶಿವಕಾಂತ ಬೆಣ್ಣೂರಕರ್, ಮಲ್ಲಿಕಾರ್ಜುನ ಕಾಳಗಿ, ಸಂಜಯ್ ಬುಳಕರ್, ಮಲ್ಲಿಕಾರ್ಜುನ ಮುಡಬೂಳಕರ್, ಜಗನ್ನಾಥ ಮುಡಬೂಳಕರ್, ಸಂತೋಷಕುಮಾರ ಕಟ್ಟಿಮನಿ, ಪೃಥ್ವಿ ಸಾಗರ್, ಸಂದೀಪ್ ಕಟ್ಟೆ, ಆನಂದ ರಾವೂರಕರ್, ರವೀಂದ್ರ ಸಜ್ಜನ ಶೆಟ್ಟಿ, ನಾಗರಾಜ್ ಹೂಗಾರ್, ವಿಜಯಕುಮಾರ ದೊಡ್ಡಮನಿ, ಅನಿಲ್ ಚವ್ಹಾಣ್, ಲೋಹಿತ್ ಮುಡಬೂಳಗಿ, ಆನಂದ ಮೊಗಳಾ, ಸುಭಾಷ್ ಕಲ್ಮರಿ, ದೇವೇಂದ್ರಪ್ಪ ಕುಮಸಿ, ರವಿಕುಮಾರ ಬಿದರಿ, ಚನ್ನು, ಸೂರಜ್ ಕಲ್ಲಕ್, ಕಾರ್ತಿಕ್ ಕಲ್ಲಕ್, ವಿಜಯ ಕಲ್ಲಕ್ ಹಾಗೂ ನಾಗೇಂದ್ರ ಬುರ್ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಮೇಶ ಕವಡೆ ನಿರೂಪಿಸಿದರು. ನಾಗರಾಜ ಓಂಕಾರ ವಂದಿಸಿದರು.



