ವಿದ್ಯಾರ್ಥಿಯಿಂದ ಟಿಕೆಟ್ ವಿತರಣೆ: ಚಾಲಕ-ಕಂ-ನಿರ್ವಾಹಕ ಅಮಾನತು
ಇಟಿಎಂ ಯಂತ್ರ ಬಳಸಿ ವಿದ್ಯಾರ್ಥಿಗೆ ಟಿಕೆಟ್ ವಿತರಿಸಲು ಅವಕಾಶ ನೀಡಿದ ಆರೋಪ

ಕಲಬುರಗಿ, ಆ.20: ಬಸ್ನಲ್ಲಿದ್ದ ವಿದ್ಯಾರ್ಥಿ ಪ್ರಯಾಣಿಕನಿಗೆ ಇಟಿಎಂ ಯಂತ್ರದ ಮೂಲಕ ಟಿಕೆಟ್ ವಿತರಿಸಲು ಅವಕಾಶ ಮಾಡಿಕೊಟ್ಟು ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-1ರ ವ್ಯಾಪ್ತಿಯ ಕಾಳಗಿ ಘಟಕದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ ತಿಳಿಸಿದ್ದಾರೆ.
ಕಳೆದ ಆ.18ರಂದು ಕಾಳಗಿ–ಕಲಬುರಗಿ–ಮಂಗಲಗಿ ಮಾರ್ಗದ ಕೆಎ-32 ಎಫ್-2066 ಸಂಖ್ಯೆಯ ಬಸ್ನಲ್ಲಿ ಕರ್ತವ್ಯದಲ್ಲಿದ್ದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪ (ಸಂಖ್ಯೆ: 7785) ಅವರು ಕಲಬುರಗಿ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದಾಗ, ತಮ್ಮ ಸುಪರ್ದಿಯಲ್ಲಿರಬೇಕಾಗಿದ್ದ ಇಟಿಎಂ ಯಂತ್ರವನ್ನು ಬಸ್ನಲ್ಲಿಯೇ ಬಿಟ್ಟು ತೆರಳಿದ್ದರು.
ಈ ಸಂದರ್ಭದಲ್ಲಿ ಬಸ್ನಲ್ಲಿದ್ದ ವಿದ್ಯಾರ್ಥಿ ಪ್ರಯಾಣಿಕನೊಬ್ಬ ಇಟಿಎಂ ಯಂತ್ರ ಬಳಸಿ ಇತರ ಪ್ರಯಾಣಿಕರಿಗೆ 11 ಟಿಕೆಟ್ಗಳನ್ನು ವಿತರಿಸಿದ್ದಾನೆ. ಈ ದೃಶ್ಯವನ್ನು ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಹಾಗೂ ನೌಕರರ ಶಿಸ್ತು ನಿಯಮಾವಳಿಗಳ ಪ್ರಕಾರ ಸಿದ್ದಪ್ಪ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ ವಿಭಾಗೀಯ ನಿಯಂತ್ರಣಾಧಿಕಾರಿಗಳು ಗುರುವಾರ ವಿಭಾಗದ ಅಧೀನದಲ್ಲಿರುವ ಘಟಕ ವ್ಯವಸ್ಥಾಪಕರು ಹಾಗೂ ಸಂಚಾರ ಸಿಬ್ಬಂದಿಯೊಂದಿಗೆ ವಿಡಿಯೋ ಸಂವಾದ ನಡೆಸಿ, ಸಂಸ್ಥೆಯ ನಿಯಮಾನುಸಾರ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದರ ಜೊತೆಗೆ ಕರ್ತವ್ಯದ ವೇಳೆ ಸಂಸ್ಥೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ.



