ಕಾಂಗ್ರೆಸ್ ಸರ್ಕಾರದ ಏಜೆಂಟರಿಂದ ರಸಗೊಬ್ಬರ ಕಾಳಸಂತೆ: ಬಿಜೆಪಿ ಆರೋಪ
ಕಾಳಸಂತೆಯಲ್ಲಿ ಅಕ್ರಮವಾಗಿ ರಸಗೊಬ್ಬರ ಮಾರಾಟ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಕಲಬುರಗಿ, ಆ.27- ನಗರದಲ್ಲಿ ಕಾಂಗ್ರೆಸ್ ಸರ್ಕಾರದ ಏಜೆಂಟರು ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಸವರಾಜ್ ಮಾಲಿಪಾಟೀಲ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಹಾಯಧನದಡಿ ರೈತರಿಗೆ ಕಡಿಮೆ ದರದಲ್ಲಿ ಯೂರಿಯಾ ರಸಗೊಬ್ಬರ ವಿತರಿಸಲಾಗುತ್ತಿದೆ. ಆದರೆ, ಇದನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.
ಕಳೆದ 23ರಂದು ನಗರದ ಕಪನೂರ್ ಕೈಗಾರಿಕಾ ಪ್ರದೇಶದಲ್ಲಿರುವ ಅಟ್ಟೂರ್ಪ್ಯಾಲೇಸ್ ದಾಲ್ಮಿಲ್ ಗೋಡೌನ್ನಲ್ಲಿ ರೈತರಿಗೆ ವಿತರಿಸಬೇಕಿದ್ದ ಯೂರಿಯಾ ರಸಗೊಬ್ಬರ ತುಂಬಿದ್ದ ಸುಮಾರು 65 ಮೆಟ್ರಿಕ್ ಟನ್ ಚೀಲಗಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಪತ್ತೆಯಾಗಿದೆ. ಈ ರಸಗೊಬ್ಬರವನ್ನು ಬೇರೆ ಚೀಲಗಳಿಗೆ ತುಂಬಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದಿಂದ ರೈತರಿಗೆ ಯಾವುದೇ ರೀತಿಯ ಸೂಕ್ತ ನೆರವು ದೊರೆಯುತ್ತಿಲ್ಲ. ಬೆಳೆ ವಿಮೆಯ ಹಣವನ್ನೂ ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ಮಳೆ ಬಾರದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ತ್ವರಿತವಾಗಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶರಣಪ್ಪ ತಳವಾರ್, ಷಣ್ಮುಖಪ್ಪ ಸಿಬರಬಂಡಿ, ಸುರೇಶ್ ರಾಠೋಡ್, ನಾರಾಯಣರಾವ್ ಕುಲಕರ್ಣಿ, ಅಮೃತ ಬಿಬರಾಣಿ, ನಿಜಲಿಂಗಪ್ಪ, ಅಯ್ಯಣ್ಣ ದೇಸಾಯಿ, ವಿಜಯಕುಮಾರ್ ಮಾಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



