ಉದ್ಯೋಗ

ಗಂವ್ವಾರ್‌ನಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನಕ್ಕೆ ಚಾಲನೆ

ವಿಕಸಿತ ಭಾರತ–ಜಿ ರಾಮ್ ಜಿ ಯೋಜನೆಯಡಿ ಉದ್ಯೋಗದ ಭದ್ರತೆ; ಮನೆ ಬಾಗಿಲಿಗೆ ಉದ್ಯೋಗ

ಜೇವರ್ಗಿ, ಆ.20- ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ಜಾಬ್ ಕಾರ್ಡ್ ಮೇಳ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅಕುಶಲ ಕೂಲಿಕಾರರು ಜಾಬ್ ಕಾರ್ಡ್ ಪಡೆದು ಉದ್ಯೋಗದ ಭದ್ರತೆ ಹೊಂದಬೇಕು ಎಂದು ತಾಲೂಕು ಐಇಸಿ ಸಂಯೋಜಕ ದಾಂಬರ್ ಪಾಟೀಲ ಕರೆ ನೀಡಿದರು.

ತಾಲೂಕಿನ ಗಂವ್ವಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂವ್ವಾರ್ ಗ್ರಾಮದಲ್ಲಿ ಬುಧವಾರ ನಡೆದ ಜಾಬ್ ಕಾರ್ಡ್ ಮೇಳ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ನೋಂದಣಿಯಾಗದ ಕುಟುಂಬಗಳಿಗೂ ಇದೀಗ ವಿಕಸಿತ ಭಾರತ–ಜಿ ರಾಮ್ ಜಿ ಯೋಜನೆಯಡಿ ಹೊಸದಾಗಿ ‘ಗ್ಯಾರಂಟಿ ರೋಜ್ಗಾರ್ ಕಾರ್ಡ್’ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಮನೆ-ಮನೆಗೆ ಭೇಟಿ ನೀಡಿ ನೋಂದಣಿ

ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಜಾಬ್ ಕಾರ್ಡ್ ನೋಂದಣಿಯಾಗದ ಕುಟುಂಬಗಳಿಂದ ನಮೂನೆ-1ರಲ್ಲಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ರೇಷನ್ ಕಾರ್ಡ್ ದಾಖಲೆಗಳನ್ನು ಸಲ್ಲಿಸಿದಲ್ಲಿ 15 ದಿನಗಳೊಳಗೆ ಗ್ರಾಮ ಪಂಚಾಯಿತಿಯಿಂದ ಜಾಬ್ ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದರು.

ವಿಶೇಷ ಚೇತನರು, ಮಹಿಳಾ ಪ್ರಧಾನ ಕುಟುಂಬಗಳು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಶೇಷ ‘ಗ್ಯಾರಂಟಿ ರೋಜ್ಗಾರ್ ಕಾರ್ಡ್’ ನೀಡಲಾಗುವುದು. ಯೋಜನೆಯಡಿ ನೋಂದಾಯಿತ ಅಕುಶಲ ಕುಟುಂಬಗಳಿಗೆ ಆರ್ಥಿಕ ವರ್ಷದಲ್ಲಿ 125 ದಿನಗಳವರೆಗೆ ಉದ್ಯೋಗ ಕಲ್ಪಿಸಲಾಗುವುದು. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಪ್ರತಿ ಮಾನವ ದಿನಕ್ಕೆ ₹382 ಕೂಲಿ ಪಾವತಿಸಲಾಗುವುದು ಎಂದು ಮಾಹಿತಿ ನೀಡಿದರು.

318 ಕಾಮಗಾರಿಗಳಿಗೆ ಅನುಮೋದನೆ

ಯೋಜನೆಯಡಿ 318 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಮಹಿಳೆಯರು, ವಿಶೇಷ ಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ದುರ್ಬಲ ವರ್ಗದವರು, ರೈತರು ಹಾಗೂ ಅತಿ ಸಣ್ಣ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆಲಸದ ಬೇಡಿಕೆಗಾಗಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿದಲ್ಲಿ 15 ದಿನಗಳೊಳಗೆ ಕೆಲಸ ಒದಗಿಸಲಾಗುವುದು ಎಂದು ತಿಳಿಸಿದರು.

ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮದಲ್ಲಿಯೇ ಕೆಲಸ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಯೋಜನೆ ಸಹಕಾರಿಯಾಗಲಿದೆ ಎಂದರು.

ಜಾನುವಾರು ಶೆಡ್, ತೋಟಗಾರಿಕೆ ಬೆಳೆ, ಬದು ನಿರ್ವಹಣೆ ಹಾಗೂ ಜಲ ಸಂರಕ್ಷಣಾ ಕಾಮಗಾರಿಗಳಂತಹ ಜೀವನೋಪಾಯ ಆಧಾರಿತ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಳ್ಳಲು ಅವಕಾಶವಿದ್ದು, ಅರ್ಹ ಕುಟುಂಬಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಂತ್ರಿಕ ಸಹಾಯಕ ಎಂಜಿನಿಯರ್ ಸ್ನೇಹಿತ್ ಹರನಾಳ್ ಹೇಳಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತ ಕಬಾಡೆ ಅವರು ಅಭಿಯಾನಕ್ಕೆ ಚಾಲನೆ ನೀಡಿ, ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ಜಾಬ್ ಕಾರ್ಡ್ ಮೇಳ ನಡೆಯಲಿದ್ದು, ಕೂಲಿ ಕಾರ್ಮಿಕರು ಸಕ್ರಿಯವಾಗಿ ಭಾಗವಹಿಸಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಳಿಕ ಜಾಬ್ ಕಾರ್ಡ್ ಜಾಗೃತಿ ವಾಹನದ ಮೂಲಕ ಗ್ರಾಮದ ವಿವಿಧ ಬೀದಿಗಳಲ್ಲಿ ಪ್ರಚಾರ ನಡೆಸಲಾಯಿತು. ಅಭಿಯಾನದಲ್ಲಿ ಕಾರ್ಯದರ್ಶಿ ಮಲ್ಲಿನಾಥ, ಡಿಇಒ ಪಾರ್ವತಿ, ಕಂದಾಯ ವಸೂಲಿಗಾರ ವಿಲಾಸ ಗೌಡ, ಜಗನ್ನಾಥ, ಕಾಯಕ ಬಂಧು ಜೆ. ಭೀಮ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button