ಅಕ್ರಮ ಕಸಾಯಿಖಾನೆ, ಗೋಸಾಗಾಟ ವಿರೋಧಿಸಿ ಪೊಲೀಸ್ ಭವನದ ಮುಂದೆ ಪ್ರತಿಭಟನೆ
ಜಿಲ್ಲೆಯಾದ್ಯಂತ ಅಕ್ರಮ ಗೋಹತ್ಯೆ ಹಾಗೂ ಗೋಸಾಗಾಟಕ್ಕೆ ಕಡಿವಾಣ ಹಾಕುವಂತೆ ಶ್ರೀರಾಮ ಸೇನೆ ಆಗ್ರಹ

ಕಲಬುರಗಿ, ಆ.27- ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮವಾಗಿ ಪರವಾನಗಿ ಇಲ್ಲದ ಕಸಾಯಿಖಾನೆಗಳು, ಅಕ್ರಮ ಗೋಸಾಗಾಟ, ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಜೂಜಾಟವನ್ನು ವಿರೋಧಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಸಾವಡಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಿವಕುಮಾರ್ ಸಾಗರ್, ರಾಜು ವಾಘಮೋರೆ, ಪ್ರಶಾಂತ್ ಸಿರೂರ್, ಉದಯ್ ಸುಲ್ತಾನಪುರ, ವೀರೇಶ್ ಬಿಂಗೆ, ಸಂಗೂ ಕಾಳಗನೂರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯ ಜೇವರ್ಗಿ, ಎಡ್ರಾಮಿ, ಆಳಂದ, ಅಫಜಲಪುರ, ಕಮಲಾಪುರ, ಸೇಡಂ, ಚಿತ್ತಾಪುರ, ಕಾಳಗಿ, ವಾಡಿ, ಶಹಾಬಾದ್ ಸೇರಿದಂತೆ ಹಲವು ತಾಲೂಕು ಹಾಗೂ ಗ್ರಾಮಗಳಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಅಕ್ರಮವಾಗಿ ಗೋವುಗಳನ್ನು ಸಾಗಿಸಿ ಪ್ರತಿನಿತ್ಯ ಸಾವಿರಾರು ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಆಳಂದ ತಾಲೂಕಿನ ಖುರೇಷಿ ಗಲ್ಲಿಯಲ್ಲಿ ಅಕ್ರಮವಾಗಿ ಹಾಗೂ ರಾಜಾರೋಷವಾಗಿ ಗೋವುಗಳನ್ನು ಹತ್ಯೆ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸಂಪೂರ್ಣ ಮಾಹಿತಿ ಇದ್ದರೂ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಆಳಂದ ತಾಲೂಕಿನಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿರುವವರ ವಿರುದ್ಧ ಹಾಗೂ ಅವರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಕ್ರಮ ಕಸಾಯಿಖಾನೆಗಳನ್ನು ಕೂಡಲೇ ಬಂದ್ ಮಾಡಿಸಬೇಕು ಹಾಗೂ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.



