ಜಿಲ್ಲಾಸುದ್ದಿ

ಅತಿಥಿ ಗೃಹದ ಸಿಬ್ಬಂದಿ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಾದಿಗ ಸಮುದಾಯದ ಸರ್ಕಾರಿ ನೌಕರನ ಮೇಲೆ ಹಲ್ಲೆ; ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯ

ಕಲಬುರಗಿ, ಆ.20: ಸರ್ಕಾರಿ ಅತಿಥಿ ಗೃಹದ ಸಿಬ್ಬಂದಿ ಮಹಾದೇವ ಕುಮಸಿಕರ್ ಅವರ ಮೇಲೆ ಮೂವರು ಯುವಕರು ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಜನ ಜಾಗೃತಿ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಮಿತಿಯ ರಾಜ್ಯಾಧ್ಯಕ್ಷ ರುಕ್ಕಪ್ಪ ಟಿ. ಕಾಂಬಳೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಿವಶರಣ ಎಂ. ನಿಂಗದಳ್ಳಿ, ಪ್ರಕಾಶ್ ವಾಡೇಕರ್, ಸಿದ್ದಲಿಂಗ ಮಾಚನೂರು, ರಿಯಲ್ ಶಾಂತು, ಸುಭಾಷ್ ಭಂಡಾರಿ, ಅಮೀರಸಾಬ್ ನದಾಫ್, ಸುರೇಶ್ ವಾಡೇಕರ್, ಮಹೇಶ್ ಎಂ. ಕಾಂಬಳೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮಾದಿಗ ಸಮುದಾಯಕ್ಕೆ ಸೇರಿದ ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆದಿದ್ದರೂ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಮಹಾದೇವ ಕುಮಸಿಕರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಆರೋಪಿಗಳ ಆಸ್ತಿ-ಪಾಸ್ತಿಗಳನ್ನು ಕಾನೂನು ಪ್ರಕಾರ ವಶಕ್ಕೆ ಪಡೆದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೆ, ಹಲ್ಲೆಗೊಳಗಾದ ಕುಮಸಿಕರ್ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button