ಸಮಾಜ

ರೈತ ಮತ್ತು ನೇಕಾರರು ನಮ್ಮ ಎರಡು ಕಣ್ಣುಗಳು: ಶಾಸಕ ಅಲ್ಲಮಪ್ರಭು ಪಾಟೀಲ

ಸಮಾಜದ ಅಭಿವೃದ್ಧಿಗೆ ಎಲ್ಲರೂ ಸಮಾನ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು

ಕಲಬುರಗಿ, ಆ.11: ರೈತರು ಮತ್ತು ನೇಕಾರರು ನಮ್ಮ ಎರಡು ಕಣ್ಣುಗಳಿದ್ದಂತೆ. ಈ ಎರಡೂ ಸಮುದಾಯಗಳ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡುವುದಾಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ಜಿಲ್ಲಾ ಹಟಗಾರ ಸಮಾಜದ ವತಿಯಿಂದ ಆಯೋಜಿಸಲಾಗಿರುವ ಪ್ರತಿಭಾ ಪುರಸ್ಕಾರ ಹಾಗೂ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಬುಧವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಸ್ವೀಕರಿಸಿ ಮಾತನಾಡಿದ ಅವರು, ರೈತ ಮತ್ತು ನೇಕಾರ ಸಮುದಾಯಗಳ ಬಗ್ಗೆ ತಮಗೆ ಸಮಾನ ದೃಷ್ಟಿಕೋನವಿದ್ದು, ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ. ಕಾರ್ಯಕ್ರಮಕ್ಕೆ ತಪ್ಪದೇ ಭಾಗವಹಿಸುವುದಾಗಿ ತಿಳಿಸಿದರು.

ನಿಮ್ಮ ಸಮುದಾಯದ ಜನರು ಒಗ್ಗಟ್ಟಾಗಿ ನೀಡಿದ ಬೆಂಬಲದಿಂದ ನಾನು ಶಾಸಕನಾಗಲು ಸಾಧ್ಯವಾಯಿತು. ನೀವು ಮಾತು ಕೊಟ್ಟಂತೆ ಮತ ನೀಡಿ ನನ್ನನ್ನು ಗೆಲ್ಲಿಸಿದ್ದೀರಿ. ನಿಮ್ಮ ಈ ಋಣವನ್ನು ಜೀವನದಲ್ಲಿ ಮರೆಯುವುದಿಲ್ಲ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಭಾವುಕರಾಗಿ ಹೇಳಿದರು.

ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಸಮಾನವಾಗಿ ಸ್ಪಂದಿಸುವುದರ ಜೊತೆಗೆ ರೈತರು ಹಾಗೂ ನೇಕಾರರ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಟಗಾರ ಸಂಘದ ಅಧ್ಯಕ್ಷ ಶ್ರವಣಕುಮಾರ ಮುನೋಳಿ, ಕಾರ್ಯದರ್ಶಿ ಚಂದ್ರಕಾಂತ, ಸಂಘಟನೆಯ ಯುವ ಮುಖಂಡರಾದ ಪ್ರಕಾಶ್ ಪೊಲೀಸ್ ಪಾಟೀಲ, ಡಾ. ಬಸವರಾಜ ಚನ್ನಾ, ಪರಮೇಶ್ವರ ಮುನೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂವಿಧಾನ ಅನುಚ್ಛೇದ 371(3) ತಿದ್ದುಪಡಿಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಹಾಗೂ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button