ಕಲಬುರಗಿಯಲ್ಲಿ ಆ.12ರಿಂದ ನೀಲಾಂಬಿಕಾ ಹಿರೇಮಠ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಅನುಚಂದನ ಆರ್ಟ್ ಸ್ಟುಡಿಯೋದಲ್ಲಿ ಮೂರು ದಿನಗಳ ಕಲಾಕೃತಿ ಪ್ರದರ್ಶನ

ಕಲಬುರಗಿ, ಆ.11: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಡಿ ಯುವ ಚಿತ್ರಕಲಾವಿದೆ ನೀಲಾಂಬಿಕಾ ಹಿರೇಮಠ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಆಗಸ್ಟ್ 12ರಿಂದ 14ರವರೆಗೆ ನಗರದ ಅನುಚಂದನ ಆರ್ಟ್ ಸ್ಟುಡಿಯೋದಲ್ಲಿ ನಡೆಯಲಿದೆ ಎಂದು ಕಲಾವಿದ ಡಾ. ಪರಶುರಾಮ್ ಪಿ. ತಿಳಿಸಿದ್ದಾರೆ.
ಆಗಸ್ಟ್ 12ರಂದು ಸಂಜೆ 5 ಗಂಟೆಗೆ ಹಿರಿಯ ಚಿತ್ರಕಲಾವಿದೆ ಹಾಗೂ ಕೃತಿಕಾ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಬಿ. ಜಾನೆ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಖ್ಯಾತ ಚಿತ್ರಕಲಾವಿದ ಬಿ.ಎನ್. ಪಾಟೀಲ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಅಧ್ಯಾಪಕ ವಿನಯಕುಮಾರ್ ರುದ್ರಸ್ವಾಮಿಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಮಿತ್ ಪಾಟೀಲ ಸೆಂಟ್ರಲ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಷ್ಮಾ ಎಸ್. ಹಡಗಿಲಮಠ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರದರ್ಶನದಲ್ಲಿ ನೀಲಾಂಬಿಕಾ ಹಿರೇಮಠ ಅವರು ವಿವಿಧ ಮಾಧ್ಯಮಗಳಲ್ಲಿ ರಚಿಸಿರುವ ಸುಮಾರು 25ಕ್ಕೂ ಹೆಚ್ಚು ವರ್ಣಚಿತ್ರ ಹಾಗೂ ನಿಸರ್ಗ ಚಿತ್ರಕೃತಿಗಳು ಪ್ರದರ್ಶನಗೊಳ್ಳಲಿವೆ. ಕಲಬುರಗಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ನೀಲಾಂಬಿಕಾ ಅವರು ಕಳೆದ ಹತ್ತು ವರ್ಷಗಳಿಂದ ಚಿತ್ರಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಹತ್ತುಕ್ಕೂ ಹೆಚ್ಚು ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
ಕಲಾ ಪ್ರೇಮಿಗಳು ಹಾಗೂ ಸಾರ್ವಜನಿಕರು ಮೂರು ದಿನಗಳ ಕಾಲ ನಡೆಯುವ ಈ ಚಿತ್ರಕಲಾ ಪ್ರದರ್ಶನಕ್ಕೆ ಭೇಟಿ ನೀಡಿ ಕಲಾವಿದೆಯ ಕಲಾಕೃತಿಗಳನ್ನು ವೀಕ್ಷಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.



