ಧಾರ್ಮಿಕ

ಕಲಬುರಗಿಯ ಪುರಾತನ ವಿಠ್ಠಲ ಮಂದಿರದಲ್ಲಿ ಜುಲೈ 25ರಂದು ವಿಶೇಷ ಆಷಾಢ ಏಕಾದಶಿ ಮಹೋತ್ಸವ

309 ವರ್ಷಗಳ ಇತಿಹಾಸದ ದೇವಾಲಯದಲ್ಲಿ ಅಭಿಷೇಕ, ದಿಂಡಿ ಯಾತ್ರೆ, ಭಜನಾ ಕಾರ್ಯಕ್ರಮಗಳ ಆಯೋಜನೆ

ನಗರದ ಸ್ಟೇಷನ್ ಬಜಾರ್ ಬಡಾವಣೆಯಲ್ಲಿರುವ ಐತಿಹಾಸಿಕ ಶ್ರೀ ವಿಠ್ಠಲ ಮಂದಿರದಲ್ಲಿ ಜುಲೈ 25ರಂದು ಆಷಾಢ ಏಕಾದಶಿ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವಿಠ್ಠಲ ಮಂದಿರ ಟ್ರಸ್ಟ್ (ರಿ.) ಅಧ್ಯಕ್ಷ ದತ್ತಾತ್ರೇಯ ಪಿ. ಮಕಾಳೆ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 309 ವರ್ಷಗಳ ಇತಿಹಾಸ ಹೊಂದಿರುವ ಈ ಪುರಾತನ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಆಷಾಢ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಜುಲೈ 25ರಂದು ಬೆಳಿಗ್ಗೆ 4 ಗಂಟೆಗೆ ಕಾಕಡ ಆರತಿಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ಪಂಚಾಮೃತ ಅಭಿಷೇಕ, ಮೂರ್ತಿ ಅಲಂಕಾರ, ಶೃಂಗಾರ ಆರತಿ ಹಾಗೂ ಮಹಾಮಂಗಳಾರತಿಯೊಂದಿಗೆ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಅದೇ ದಿನ ಬೆಳಿಗ್ಗೆ 6 ಗಂಟೆಗೆ ಮಾರ್ವಾಡಿ ಸಮಾಜದ ವತಿಯಿಂದ ಮಾಯಾ ಮಂದಿರದಿಂದ ಶ್ರೀ ವಿಠ್ಠಲ ಮಂದಿರದವರೆಗೆ ದಿಂಡಿ ಯಾತ್ರೆ ನಡೆಯಲಿದೆ. ಬೆಳಿಗ್ಗೆ 9.30ರಿಂದ 11.30ರವರೆಗೆ ಸಾರ್ವಜನಿಕರಿಂದ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಏರ್ಪಡಿಸಲಾಗಿದೆ.

ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಗಳಿಂದ ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಟ್ರಸ್ಟ್ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಧನಂಜಯ ಎಸ್. ಪೂರಿ, ಉಪಾಧ್ಯಕ್ಷ ಬ್ರಿಜ್‌ಗೋಪಾಲ್ ಡಗಾ, ಖಜಾಂಚಿ ವಿಜಯಕುಮಾರ್ ತೋಷ್ಣಿವಾಲ್, ಮಹಾನಗರ ಪಾಲಿಕೆ ಸದಸ್ಯ ಮಲ್ಲು ಉದನೂರ ಹಾಗೂ ಶರಣಗೌಡ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button