ಗ್ರೂಪ್-ಸಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ಶಿಬಿರ: ಅರ್ಜಿ ಆಹ್ವಾನ
ವಸತಿ, 24x7 ಅಧ್ಯಯನ ಕೇಂದ್ರ ಹಾಗೂ ಇಂಟರ್‌ನೆಟ್ ಸೌಲಭ್ಯದೊಂದಿಗೆ ಮೂರುವರೆ ತಿಂಗಳ ತರಬೇತಿ

ಕನಕಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ಸರ್ಕಾರದ ಗ್ರೂಪ್-ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಭಾವಿ ಉಚಿತ ತರಬೇತಿ ಶಿಬಿರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಟ್ರಸ್ಟ್‌ನ ಸಂಸ್ಥಾಪಕ ಹಾಗೂ ನಿರ್ದೇಶಕ ವಿನಾಯಕುಮಾರ್ ಜಿ.ಬಿ. ಅವರು ಈ ಕುರಿತು ಮಾಹಿತಿ ನೀಡಿದ್ದು, ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯ ಕನಕಶ್ರೀ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಮೂರುವರೆ ತಿಂಗಳ ತರಬೇತಿ ಶಿಬಿರ ನಡೆಯಲಿದೆ. ತರಬೇತಿ ಅವಧಿಯಲ್ಲಿ ಉಚಿತ ವಸತಿ, 24 ಗಂಟೆಗಳ ಅಧ್ಯಯನ ಕೇಂದ್ರ ಹಾಗೂ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆಗಸ್ಟ್ 10ರೊಳಗೆ ಕನಕಶ್ರೀ ಚಾರಿಟಬಲ್ ಟ್ರಸ್ಟ್ ವಿಳಾಸಕ್ಕೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರ ಆರಂಭಕ್ಕೂ ಮುನ್ನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರಿ ಸೇವೆ ಸೇರುವ ಕನಸು ಹೊಂದಿರುವ ಯುವಕ-ಯುವತಿಯರಿಗೆ ಗುಣಮಟ್ಟದ ತರಬೇತಿಯನ್ನು ಕಡಿಮೆ ವೆಚ್ಚದಲ್ಲಿ ಹಾಗೂ ಸಮಾಜಸೇವೆಯ ಉದ್ದೇಶದಿಂದ ನೀಡಲಾಗುತ್ತಿದೆ. ಬದಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿಗೆ ಅನುಗುಣವಾಗಿ ಪರಿಣಿತ ಬೋಧಕರಿಂದ ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಹಯೋಗದಲ್ಲಿ ತರಬೇತಿ ನಡೆಯಲಿದ್ದು, ಈ ಸಂಸ್ಥೆಯ ಮಾರ್ಗದರ್ಶನದಲ್ಲಿ ಹಲವರು ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ವಿನಾಯಕುಮಾರ್ ಜಿ.ಬಿ. ತಿಳಿಸಿದ್ದಾರೆ.



