ಆಯುಷ್ ಇಲಾಖೆಯಿಂದ ಅರುಜೀವ ಆಸ್ಪತ್ರೆಗೆ ಮಾನ್ಯತೆ; ಆರೋಗ್ಯ ವಿಮೆ ಯೋಜನೆಗಳ ಸೌಲಭ್ಯ ಲಭ್ಯ
ಕೇಂದ್ರ-ರಾಜ್ಯ ಸರ್ಕಾರಿ ನೌಕರರು ಹಾಗೂ ಅರ್ಹ ಫಲಾನುಭವಿಗಳಿಗೆ ಆಯುರ್ವೇದ ಚಿಕಿತ್ಸಾ ವೆಚ್ಚ ಮರುಪಾವತಿ ಸೌಲಭ್ಯ; ಗುಣಮಟ್ಟದ ಸೇವೆಗೆ ಮತ್ತೊಂದು ಮನ್ನಣೆ

ನಗರದ ಅರುಜೀವ ಆಯುರ್ವೇದ ಆಸ್ಪತ್ರೆಗೆ ಆಯುಷ್ ಇಲಾಖೆಯಿಂದ ರಾಷ್ಟ್ರೀಯ ಗುಣಮಟ್ಟದ ಕ್ಯೂಎಐ 7101 ಮಾನ್ಯತೆ ದೊರೆತಿದ್ದು, ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಆರೋಗ್ಯ ವಿಮಾ ಯೋಜನೆಗಳ ಅಡಿಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಆಸ್ಪತ್ರೆಯ ಸೇವೆಗಳು ಇನ್ನಷ್ಟು ಸುಲಭವಾಗಿ ಲಭ್ಯವಾಗಲಿವೆ ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೌಸ್ತುಭ ಧುಮಾಳ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾನ್ಯತೆ ಕಲಬುರಗಿ ಜಿಲ್ಲೆಗೆ ಮಾತ್ರವಲ್ಲದೆ ಕರ್ನಾಟಕಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದರು. ಗುಣಮಟ್ಟದ ಆಯುರ್ವೇದ ಚಿಕಿತ್ಸೆ, ರೋಗಿಗಳ ಸುರಕ್ಷತೆ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸೇವಾ ಮಾನದಂಡಗಳನ್ನು ಆಸ್ಪತ್ರೆ ಯಶಸ್ವಿಯಾಗಿ ಪಾಲಿಸಿರುವುದಕ್ಕೆ ಈ ಮಾನ್ಯತೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಮಾನವೀಯ ಕಲ್ಯಾಣ ಟ್ರಸ್ಟ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರುಜೀವ ಆಸ್ಪತ್ರೆ ಕ್ಯೂಎಐ 7101 ಪ್ರಮಾಣೀಕರಣ ಪಡೆದಿರುವುದು ಆಯುರ್ವೇದ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ. ರೋಗಿ ಕೇಂದ್ರಿತ ಸೇವೆ, ವೈದ್ಯಕೀಯ ಆಡಳಿತ, ಸುರಕ್ಷತಾ ಕ್ರಮಗಳು, ನೈತಿಕ ಮೌಲ್ಯಗಳು ಹಾಗೂ ಗುಣಮಟ್ಟದ ನಿರ್ವಹಣೆಯಲ್ಲಿ ಆಸ್ಪತ್ರೆ ಉನ್ನತ ಮಟ್ಟದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ ಎಂದು ಅವರು ತಿಳಿಸಿದರು.
ಆಯುರ್ವೇದ ಚಿಕಿತ್ಸೆಯನ್ನು ಆಧುನಿಕ ಗುಣಮಟ್ಟದ ವ್ಯವಸ್ಥೆಗಳೊಂದಿಗೆ ಸಂಯೋಜಿಸಿ ಪಂಚಕರ್ಮ, ಯೋಗ, ಪ್ರಕೃತಿ ಚಿಕಿತ್ಸೆ, ಆಹಾರ ಪದ್ಧತಿ ಹಾಗೂ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ರೋಗದ ಮೂಲ ಕಾರಣವನ್ನು ನಿವಾರಿಸಿ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ವೃದ್ಧಿಗೆ ಆಸ್ಪತ್ರೆ ಆದ್ಯತೆ ನೀಡುತ್ತಿದೆ ಎಂದು ವಿವರಿಸಿದರು.
ಕಳೆದ ಒಂದು ವರ್ಷದಲ್ಲಿ ಭಾರತ ಸೇರಿದಂತೆ ಯುರೋಪ್, ಅಮೆರಿಕ ಹಾಗೂ ಇತರ ಹಲವು ದೇಶಗಳಿಂದ ಆಗಮಿಸಿದ ಅನೇಕ ರೋಗಿಗಳು ಪಂಚಕರ್ಮ, ದೀರ್ಘಕಾಲೀನ ಕಾಯಿಲೆಗಳ ಚಿಕಿತ್ಸೆ ಹಾಗೂ ಆರೋಗ್ಯ ಪುನಶ್ಚೇತನ ಸೇವೆಗಳನ್ನು ಪಡೆದು ಉತ್ತಮ ಫಲಿತಾಂಶ ಕಂಡಿದ್ದಾರೆ. ಈ ಮಾನ್ಯತೆಯಿಂದ ಕಲಬುರಗಿಯು ವೈದ್ಯಕೀಯ ಮತ್ತು ವೆಲ್‌ನೆಸ್ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಬೆಳೆಯುವ ಸಾಧ್ಯತೆ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು.
ಈ ಮಾನ್ಯತೆ ಕೇವಲ ಒಂದು ಪ್ರಮಾಣಪತ್ರವಲ್ಲ; ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಮ್ಮ ಬದ್ಧತೆಗೆ ದೊರೆತ ಗೌರವವಾಗಿದೆ. ಆಯುರ್ವೇದದ ಶುದ್ಧತೆ, ವೈಜ್ಞಾನಿಕತೆ ಮತ್ತು ರೋಗಿಗಳ ವಿಶ್ವಾಸವನ್ನು ಕಾಪಾಡಿಕೊಂಡು ಇನ್ನಷ್ಟು ಉತ್ತಮ ಸೇವೆ ನೀಡಲು ಆಸ್ಪತ್ರೆ ಸದಾ ಬದ್ಧವಾಗಿದೆ ಎಂದು ಡಾ. ಕೌಸ್ತುಭ ಧುಮಾಳ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



