ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪ: ಜಿಲ್ಲಾ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯ
ಸೇವೆಗೆ ಮರುನೇಮಕ ಮಾಡದ ಹಿನ್ನೆಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಅಮಾನತುಗೊಳಿಸಲು ಆಗ್ರಹ

ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದ್ದರೂ ವಿಕಲಚೇತನ ಬಸವರಾಜ್ ಜೆ. ಹಡಪದ್ ಅವರನ್ನು ಸೇವೆಗೆ ಮರುನೇಮಕ ಮಾಡದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ (ಪ್ರಭಾರಿ) ಸಾದಿಕ್ ಹುಸೇನ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ನವ ಕರ್ನಾಟಕ ವಿಕಲಚೇತನ ಗೌರವ ಕಾರ್ಯಕರ್ತರ ಸಂಘದ ಅಧ್ಯಕ್ಷ ಅಂಬಾಜಿ ಮೇಟಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ್ ಜೆ. ಹಡಪದ್ ಅವರನ್ನು ಏಕಪಕ್ಷೀಯವಾಗಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಬಳಿಕ, ಅವರನ್ನು ಕೂಡಲೇ ಸೇವೆಗೆ ಮರುನೇಮಕ ಮಾಡುವಂತೆ ನ್ಯಾಯಾಲಯ ಜೂನ್ 8ರಂದು ಸ್ಪಷ್ಟ ಆದೇಶ ನೀಡಿದೆ ಎಂದು ಹೇಳಿದರು.
ಆದರೆ, ನ್ಯಾಯಾಲಯದ ಆದೇಶದ ಪ್ರತಿಯನ್ನು ಇಲಾಖೆಗೆ ಸಲ್ಲಿಸಿ ಮರುನೇಮಕಕ್ಕೆ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಒಂದು ತಿಂಗಳಿನಿಂದ ಬಸವರಾಜ್ ಹಡಪದ್ ಇಲಾಖೆಯ ಕಚೇರಿಗೆ ಅಲೆದಾಡುತ್ತಿದ್ದರೂ ಪ್ರಭಾರಿ ಅಧಿಕಾರಿ ಸಾದಿಕ್ ಹುಸೇನ್ ಖಾನ್ ಸ್ಪಂದಿಸದೆ ಹೈಕೋರ್ಟ್ ಆದೇಶವನ್ನೇ ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದೆ ನ್ಯಾಯಾಂಗದ ಗೌರವಕ್ಕೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಸಾದಿಕ್ ಹುಸೇನ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ಕೂಡಲೇ ಅಮಾನತುಗೊಳಿಸಬೇಕು ಎಂದು ಅಂಬಾಜಿ ಮೇಟಿ ಒತ್ತಾಯಿಸಿದರು.
ಈ ಹಿಂದೆ ಕೂಡ ಅಧಿಕಾರಿಯ ಕಾರ್ಯವೈಖರಿ ಕುರಿತು ಹಲವು ದೂರುಗಳು ಬಂದಿದ್ದವು. ಆಗಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಿಗೆ ಈ ಕುರಿತು ಪತ್ರ ಬರೆದಿದ್ದರೂ ಯಾವುದೇ ಕ್ರಮ ಜರುಗಿಲ್ಲ. ಇದರಿಂದ ಅಧಿಕಾರಿಯ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಅವರು ದೂರಿದರು.
ಕಲಬುರಗಿ ಜಿಲ್ಲೆಗೆ ಪೂರ್ಣಾವಧಿಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯನ್ನು ನೇಮಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ, ಧರಣಿ, ಮನವಿ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿತು.



