ದಂಡ ಪಾವತಿಸಿದ ಕಡಗಂಚಿ ಟ್ರಸ್ಟ್: ಇಬ್ಬರು ಬಂದಿಗಳಿಗೆ ಬಿಡುಗಡೆ ಭಾಗ್ಯ

ಕಲಬುರ್ಗಿ, ಜು.4- ದಂಡದ ಹಣ ಪಾವತಿಸದೇ ಕಾರಾಗೃಹದಲ್ಲಿಯೇ ಉಳಿದ ಇಬ್ಬರು ಬಂದಿಗಳಿಗೆ ಮಾನವೀಯತೆ ಮೇರೆಗೆ ಸಾಮಾಜಿಕ ಸಂಸ್ಥೆಯೊಂದು ಹಣ ಪಾವತಿಸಿದ್ದರಿಂದ ಇಬ್ಬರು ಖೈದಿಗಳಿಗೆ ಬಿಡುಗಡೆಯ ಭಾಗ್ಯ ದೊರಕಿದೆ.
ನಗರದ ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿ ದಿಗಂಬರ್ ತಂದೆ ಸುಭಾಷ್ ನಾಟೀಕಾರ್ ಹಾಗೂ ಶಿವಕುಮಾರ್ ತಂದೆ ಅರ್ಜುನ್ ಪ್ರಸಾದ್ ಅವರಿಬ್ಬರೂ ದಂಡದ ಹಣ ಕಟ್ಟಲು ಆರ್ಥಿಕವಾಗಿ ದುರ್ಬಲರಾದ ಕಾರಣ ಬಿಡಗಡೆ ಹೊಂದಲು ಸಾಧ್ಯವಾಗಿರಲಿಲ್ಲ. ಸಂಸ್ಥೆಯ ಮುಖ್ಯಸ್ಥ ರಾಕೇಶ್ ಕಾಂಬಳೆ ಅವರು ಕಡಗಂಚಿಯ ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯವರಿಗೆ ಸಂಪರ್ಕಿಸಿದರು.
ದಿಗಂಬರ್ ನಾಟೀಕಾರನಿಗೆ 13000ರೂ.ಗಳು ಹಾಗೂ ಶಿವಕುಮಾ ಪ್ರಸಾದನಿಗೆ 15000ರೂ.ಗಳು ಸೇರಿ ಒಟ್ಟು 28000ರೂ.ಗಳನ್ನು ಫಾದರ್ ವಿಲಿಯಂ ಮಿರಿಂದಾ ಮತ್ತು ಫಾದರ್ ಮ್ಯಾಗ್ಸಿಮ್ ಅವರು ಪಾವತಿಸಲು ಕೋರಲಾಗಿತ್ತು. ಅದರಂತೆ ಅವರು ಹಣ ಪಾವತಿಸಿ ಬಿಡುಗಡೆಗೆ ಸಹಕರಿಸಿದರು. ಈ ಕುರಿತು ಸಂಸ್ಥೆಯ ಮುಖ್ಯಸ್ಥ ರಾಕೇಶ್ ಕಾಂಬಳೆ ಅವರು ಅಭಿನಂದಿಸಿದರು. ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಬಿ. ಸುರೇಶ್, ಚನ್ನಪ್ಪ ಯಟಗಾರ್, ಸಹಾಯ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ, ಶಿಕ್ಷಕ ನಾಗರಾಜ್ ಮೂಲಗೆ ಅವರು ಬಿಡುಗಡೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.



