ಜಾರಕಿಹೊಳಿ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ

ಜೇವರ್ಗಿ, ಸೆ.11: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ರಾಜಕೀಯ ಬೆಳವಣಿಗೆ ಮತ್ತು ಜನಪ್ರಿಯತೆಯನ್ನು ಸಹಿಸದೆ ಬಿಜೆಪಿ ರಾಜಕೀಯ ಪ್ರೇರಿತವಾಗಿ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ನಡೆಸಿಸಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಪ್ರಮೋದ್ ದೊರೆ ಯಡ್ರಾಮಿ ಆರೋಪಿಸಿದರು.
ಸತೀಶ್ ಜಾರಕಿಹೊಳಿ ಅವರು ರಾಜ್ಯಾದ್ಯಂತ ಜನಪ್ರಿಯ ನಾಯಕರಾಗಿ, ದಲಿತರು, ಶೋಷಿತರು ಹಾಗೂ ಧ್ವನಿ ಇಲ್ಲದವರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಕಳಂಕರಹಿತ ರಾಜಕಾರಣದ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಈ ಹಿಂದೆ ನಡೆದ ವಿವಿಧ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು.
ದಲಿತ ನಾಯಕರ ಜನಪ್ರಿಯತೆಯನ್ನು ಸಹಿಸದ ಕೇಂದ್ರ ಸರ್ಕಾರ ಇಡಿ ಮೂಲಕ ದಾಳಿ ನಡೆಸಿ, ಅವರ ಧ್ವನಿಯನ್ನು ಕುಗ್ಗಿಸುವ ತಂತ್ರ ಅನುಸರಿಸುತ್ತಿದೆ ಎಂದು ಪ್ರಮೋದ್ ದೊರೆ ಆರೋಪಿಸಿದರು.
ಸತೀಶ್ ಜಾರಕಿಹೊಳಿ ಅವರ ಜನಬೆಂಬಲ ಹಾಗೂ ರಾಜಕೀಯ ಪ್ರಭಾವದಿಂದ ಬಿಜೆಪಿ ನಾಯಕರು ಆತಂಕಗೊಂಡಿದ್ದಾರೆ. ಇದೇ ಕಾರಣಕ್ಕೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಅವರನ್ನು ಹೆದರಿಸುವ ಹಾಗೂ ರಾಜಕೀಯವಾಗಿ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದರು.
ಇಂತಹ ರಾಜಕೀಯ ಬೆದರಿಕೆಗಳಿಗೆ ಸತೀಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಎಂದಿಗೂ ಜಗ್ಗುವುದಿಲ್ಲ. ಜನರ ಬೆಂಬಲದೊಂದಿಗೆ ಇಂತಹ ಕುತಂತ್ರಗಳನ್ನು ಎದುರಿಸಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಹೋರಾಟ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಮೋದ್ ದೊರೆ ಯಡ್ರಾಮಿ ಎಚ್ಚರಿಸಿದರು.



