ವಚನ ಸಾಹಿತ್ಯದಿಂದ ಸಮಾಜಕ್ಕೆ ಸಮಾನತೆ ಸಂದೇಶ: ಟೆಂಗಳಿ

ಕಲಬುರ್ಗಿ, ಜು.4- ವಚನ ಸಾಹಿತ್ಯವು ಸಮಾಜಕ್ಕೆ ಸಮಾನತೆಯ ಸಂದೇಶ ನೀಡಿದೆ ಎಂದು ಉದ್ಯಮಿ ಸೋಮಶೇಖರ ಟೆಂಗಳಿ ಅವರು ಹೇಳಿದರು.
ನಗರದ ಬ್ರಹ್ಮಪುರದ ಗೋವಾ ಹೊಟೇಲ್ ಸಮೀಪದ ಅಶೋಕ್ ಕಾಂಪ್ಲೆಕ್ಸ್ನಲ್ಲಿರುವ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಜರುಗಿದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ 146ನೇ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ವಚನ ಸಾಹಿತ್ಯವು ಸಮಾಜಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶವನ್ನು ನೀಡಿದೆ. ಫ. ಗು ಹಳಕಟ್ಟಿ ಯವರ ಜಯಂತಿ ಆಚರಣೆ ನಮ್ಮ ಕರ್ತವ್ಯವಾಗಿದೆ ಇಂತಹ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಅವರ ಸಹಕಾರಿ ಬ್ಯಾಂಕ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸಮಾಜ ಸೇವಕಿ ಮಾಲಾಶ್ರೀ ಕಣ್ಣಿ ಮಾತನಾಡಿ, ಕಲಬುರ್ಗಿ ಶರಣರ ನಾಡು. ವಚನ ಸಾಹಿತ್ಯ ಮತ್ತು ಶರಣರ ತತ್ವಗಳನ್ನು ಅರಿತ ಪ್ರತಿಯೊಬ್ಬರೂ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹಾರ ನಡೆಸುವ ಮೂಲಕ ಸಂಸ್ಥಾಪಕರ ಆದರ್ಶವನ್ನು ಉಳಿಸಬೇಕು ಎಂದು ಕರೆ ನೀಡಿದರು. ನ್ಯಾಯವಾದಿ ವಿನೋದಕುಮಾರ್ ಜೇನವೆರಿ ಅವರು ಮಾತನಾಡಿ, ವಚನವನ್ನು ಓದುತ್ತಾ, ಕನ್ನಡದ ಆದ್ಯ ವಚನ ಸಾಹಿತ್ಯ ಜನಕ, ಶ್ರೀ ದಾಸಿಮಯ್ಯನವರ ವಚನ ಹರಿದ ಗೋಣಿಯಲೊಬ್ಬ ಕಳವೆಯ ತುಂಬಿಕೊಂಡು, ಇರುಳೆಲ್ಲ ನಡೆದನಾ ಸುಂಕಕಂಜಿ; ಸುಂಕಿಗ ಬಿಡುವನೆ ಸುಂಕವ ಕೊಂಡಲ್ಲದೆ? ತುಂಬಿದ ಕಳವೆಲ್ಲ ದಾರಿಯಲಿ ಹೋಯಿತ್ತಲ್ಲಾ, ರಾಮನಾಥ ಎಂದು ಉಲ್ಲೇಖ ಮಾಡಿ ಮೋಸ ಮತ್ತು ಕಳ್ಳತನದಿಂದ ಗಳಿಸಿದ ಸಂಪತ್ತು ಶಾಶ್ವತವಲ್ಲ ಎಂದರು.
ನಿತ್ಯ ಕಾಯಕ ಹಾಗೂ ಸತ್ಯನಿಷ್ಠೆಯಿಂದ ಸಂಪಾದಿಸಿದ ಸಂಪತ್ತೇ ಉಳಿಯುತ್ತದೆ. ಸಾವಿರ ವರ್ಷಗಳ ಇತಿಹಾಸವನ್ನು ಅವಲೋಕಿಸಿದಾಗ ನೇಕಾರ ಸಮುದಾಯವು ಶಿಸ್ತುಬದ್ಧ ಆರ್ಥಿಕ ವ್ಯವಸ್ಥೆಯನ್ನು ಸಮಾಜಕ್ಕೆ ಪರಿಚಯಿಸಿದ ಮೊದಲಿಗರೆಂಬುದು ವಿಶ್ವ ಮಾನ್ಯ ಶರಣ ದಾಸಿಮಯ್ಯನ ವಚನಗಳಿಂದ ತಿಳಿದು ಬರುತ್ತದೆ. ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಮುಂದಿನ ದಿನಗಳಲ್ಲಿ ಪರಿಪೂರ್ಣ ಬ್ಯಾಂಕ್ ಆಗಿ ಬೆಳೆಯಲಿ ಎಂದು ಅವರು ಹಾರೈಸಿದರು.
ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಲ್ಯಾಣಕುಮಾರ್ ಶೀಲವಂತ ಹಾಗೂ ರಾಜಕುಮಾರ್ ಬಿ. ಉದನೂರು ಅವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಶಿಕ್ಷಕ ಸತೀಶ್ ಜಾಮಗೊಂಡ ಅವರು ಬದುಕು ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿ, ಡಾ. ಫ. ಗು. ಹಳಕಟ್ಟಿ ಅವರ ಸಾಮಾಜಿಕ, ಆರ್ಥಿಕ ಹಾಗೂ ಸಾಹಿತ್ಯಿಕ ಕೊಡುಗೆಗಳನ್ನು ಸ್ಮರಿಸಿದರು. ಅಧ್ಯಕ್ಷತೆಯನ್ನು ಬ್ಯಾಂಕಿನ ವ್ಯವಸ್ಥಾಪಕ ಧರ್ಮರಾಯ ಮಮದಾಪುರ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರಾದ ಬಸವತರಾಯ ಕೊಳಕೂರ್, ಸಂಗಣ್ಣ ಭೀಮಳ್ಳಿ, ಶಿವರಾಜ್ ಅಂಡಗಿ, ಬ್ಯಾಂಕಿನ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.



