ಶಿಕ್ಷಣಸಮಾಜ

ಯಾದವಾಡದಲ್ಲಿ ಗುರುವಂದನಾ ಕಾರ್ಯಕ್ರಮಕ್ಕೆ ಭರದ ಸಿದ್ಧತೆ

ನಿವೃತ್ತ ಶಿಕ್ಷಕ ಬಿ.ಎಸ್. ಪರಗುಣಿಯವರಿಗೆ ಔಪಚಾರಿಕ ಆಹ್ವಾನ

ಬೆಳಗಾವಿ, ಸೆ.28: ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಯಾದವಾಡದ ಶ್ರೀ ಜಿಎನ್‌ಎಸ್ ಪ್ರೌಢಶಾಲೆಯಲ್ಲಿ 2013–14ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಅ.31ರಂದು ಹಮ್ಮಿಕೊಳ್ಳಲಿರುವ ಗುರುವಂದನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎರಡನೇ ಹಂತದ ಪೂರ್ವಭಾವಿ ಸಭೆ ನಡೆಯಿತು.

ಗುರುವಂದನಾ ಕಾರ್ಯಕ್ರಮದಲ್ಲಿ ಮೂವರು ಶಿಕ್ಷಕರನ್ನು ಅಭಿನಂದಿಸಲು ನಿರ್ಧರಿಸಲಾಗಿದ್ದು, ಕಳೆದ ಬಾರಿ ಮುಧೋಳದ ನಿವೃತ್ತ ಶಿಕ್ಷಕ ಗಾಣಿಗಿ ಹಾಗೂ ಮಹಾಲಿಂಗಪುರದ ನಿವೃತ್ತ ಶಿಕ್ಷಕ ಹುಬ್ಬಳ್ಳಿ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಔಪಚಾರಿಕ ಆಹ್ವಾನ ನೀಡಿದ್ದರು.

ಈ ಬಾರಿ ಯಾದವಾಡದಲ್ಲಿಯೇ ಇರುವ ಜೀವಶಾಸ್ತ್ರ ವಿಷಯದ ನಿವೃತ್ತ ಶಿಕ್ಷಕ ಬಿ.ಎಸ್. ಪರಗುಣಿ ಅವರನ್ನು ಸಹಪಾಠಿಗಳು ಶಾಲು ಹೊದಿಸಿ, ಫಲಪುಷ್ಪ ನೀಡಿ ಔಪಚಾರಿಕವಾಗಿ ಆಹ್ವಾನಿಸಿದರು. ಪರಗುಣಿ ಅವರು ಸಂತೋಷದಿಂದ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಒಪ್ಪಿಕೊಂಡರು.

ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಕಿಯರಾದ ಶ್ರೀಮತಿ ಗೋ.ದಾವರಿ ಅ. ದೇಶಪಾಂಡೆ, ಶ್ರೀಮತಿ ಮಹಾದೇವಿ ಎಸ್. ಪೂಜಾರ, ಉಪನ್ಯಾಸಕಿ ಶ್ರೀಮತಿ ಗಿರಿಜಾ ತಾಂವಶಿ, ಶ್ರೀಮತಿ ಸುಶೀಲಾ ಎಂ. ಕೊನೆಸಾಗರ ಸೇರಿದಂತೆ ಹಲವರು ಮಾತನಾಡಿ, ತಮ್ಮ ಪರಿಚಯದೊಂದಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವುದಾಗಿ ತಿಳಿಸಿದರು.

ಶಿಕ್ಷಕರಾದ ರಾಜೇಂದ್ರ ಸಿ. ಕಲ್ಯಾಣಿ, ವೆಂಕಟೇಶ ಲಕ್ಷ್ಮಣ, ಮಲ್ಲಿಕಾರ್ಜುನ ಹುಲಗಬಾಳಿ, ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಹಲವರು ಸಭೆಯಲ್ಲಿ ಮಾತನಾಡಿದರು.

ಕಾರ್ಯಕ್ರಮಕ್ಕೆ ₹1.50 ಲಕ್ಷ ವೆಚ್ಚದ ಅಂದಾಜು

ಸಭೆಯಲ್ಲಿ ಹಳೆಯ ವಿದ್ಯಾರ್ಥಿಗಳಾದ ಅಮೀನಸಾಬ್ ಏಳೂರು ಹಾಗೂ ಮಹಿಬೂಬ್ ತರಕಾರ ಅವರು ಗುರುವಂದನಾ ಕಾರ್ಯಕ್ರಮದ ಉಪಹಾರ ಹಾಗೂ ಊಟದ ವೆಚ್ಚವನ್ನು ತಾವೇ ಭರಿಸುವುದಾಗಿ ಘೋಷಿಸಿದರು.

ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಹಣಕಾಸಿನ ವ್ಯವಹಾರವನ್ನು ಮಾಜಿ ಸೈನಿಕ ಬಸವರಾಜ ಜಿ. ಮಾಳೇದ್ ಅವರಿಗೆ ವಹಿಸಲಾಯಿತು.

ಕಾರ್ಯಕ್ರಮಕ್ಕೆ ಒಟ್ಟು ಸುಮಾರು ₹1.50 ಲಕ್ಷ ವೆಚ್ಚವಾಗುವ ಅಂದಾಜು ಮಾಡಲಾಗಿದ್ದು, ಪ್ರತಿಯೊಬ್ಬರಿಂದ ₹5 ಸಾವಿರ ದೇಣಿಗೆ ಸಂಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಘೋಷಣೆಯಂತೆ ಶಿಕ್ಷಕಿ ಶ್ರೀಮತಿ ಮಹಾದೇವಿ ಸೊ. ಪೂಜಾರ ಹಾಗೂ ನಿವೃತ್ತ ಶಿಕ್ಷಕ ಸುರೇಶ್ ಪೂಜಾರ ಅವರು ತಲಾ ₹5 ಸಾವಿರ ನೀಡಿದರು. ಬಳಿಕ ಬಸವರಾಜ ಮಾಳೇದ್ ಹಾಗೂ ಶಿಕ್ಷಕ ವೆಂಕಟೇಶ ಲಕ್ಷ್ಮಣ ಅವರು ತಲಾ ₹5 ಸಾವಿರ ಕೊಡುಗೆ ನೀಡಿದರು.

ಸಹಪಾಠಿಗಳು ನಿಗದಿತ ₹5 ಸಾವಿರ ಮೊತ್ತವನ್ನು ಬಸವರಾಜ ಮಾಳೇದ್ ಅವರ ಮೊಬೈಲ್ ಸಂಖ್ಯೆಗೆ ಹಣ ವರ್ಗಾವಣೆ ಮಾಡುವ ಮೂಲಕ ನೀಡಬಹುದು ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಶ್ರೀಮತಿ ತಾರದೇವಿ ಉದಪುಡಿ, ಶ್ರೀಮತಿ ವಿಜಯಲಕ್ಷ್ಮೀ ಶೇರಿಗಾರ, ಶ್ರೀಮತಿ ಮಹೇಶ್ವರಿ ಮುನವಳ್ಳಿ, ಮಹಿಬೂಬ್ ಬಟಕುರ್ಕಿ, ಬಾಬು ಏಳೂರು, ಗುರುಶಾಂತ ಕರತಮ್ಮದ್, ಮಹಾದೇವ ಹಾವಣ್ಣವರ, ಸುರೇಶ್ ಕಲಾಲ, ವಿಷ್ಣುಪಂತ ಕಲಾಲ, ಮೂಸಾ ತರಕಾರ, ಈಶ್ವರ ದುಂ. ಅಂಗಡಿ, ಬಸಪ್ಪ ಮಾಯಣ್ಣವರ, ಲಕ್ಷ್ಮಣ ಮಂಟನವರ, ಲಾಲಸಾಬ್ ದಂತಾಳಿ, ಈಶ್ವರ ಅಮಲಜೇರಿ, ಈರವ್ವ ಡುಮ್ಮನವರ, ಮಲ್ಲಪ್ಪ ಬಾಗಿ ಸೇರಿದಂತೆ ಹಲವು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಗುರು ತುಪ್ಪದ ಅವರು ಪ್ರಾರ್ಥನಾ ಗೀತೆ ಹಾಡಿದರು.

Related Articles

Leave a Reply

Your email address will not be published. Required fields are marked *

Back to top button