ಗಾಂಧೀಜಿ, ಶಾಸ್ತ್ರಿ ಜಯಂತಿಗೆ ಬಾಲರಾಜ್ ಗುತೇದಾರ್ ಗೈರು

ಕಲಬುರಗಿ, ಅ.2- ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ್ ಬೀರ್ಬಿಟ್ಟಿ ಕರೆ ನೀಡಿದರು.
ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಗುತೇದಾರ್ ಅವರ ಗೈರು ಹಾಜರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜಯಂತಿ ಅಂಗವಾಗಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವರಾಜ್ ಬೀರ್ಬಿಟ್ಟಿ ಅವರು ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆ ಹಾಗೂ ಶಾಂತಿಯ ಮಾರ್ಗದ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದರು. ಅವರ ಜೀವನ ಮತ್ತು ವಿಚಾರಧಾರೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಅದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆ, ಪ್ರಾಮಾಣಿಕತೆ ಹಾಗೂ ದೇಶಸೇವೆಗೆ ಮಾದರಿಯಾಗಿದ್ದಾರೆ. ಇಬ್ಬರು ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ಬೆಳೆಸುವ ನಿಟ್ಟಿನಲ್ಲಿ ಗಾಂಧೀಜಿ ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ದೇಶದ ಅಭಿವೃದ್ಧಿ ಹಾಗೂ ಸಾಮಾಜಿಕ ಏಕತೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಬಸವರಾಜ್ ಬೀರ್ಬಿಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ರಾಮಚಂದ್ರ ಅಟೂರ್, ಮಲ್ಲಿಕಾರ್ಜುನ ಸಂಗಾಣಿ, ಮಹಾಂತಪ್ಪ ಮದರಿ, ಬಸವರಾಜ್ ಪಾಟೀಲ, ದೇವೇಂದ್ರ ಹಸನಾಪುರ, ಹೊಬಸಿಂಗ್ ಚವಾಣ್, ಮಾರುತಿ ಚವಾಣ್, ಪ್ರಮೋದ್ ಪಾಟೀಲ, ಹಣಮಂತ ಕಂದಳ್ಳಿ, ಸುನಿಲ್ ಗಾದಗೆ, ಹೇಮಂತ್ ಶಾ, ಸಿದ್ದರಾಮಪ್ಪ ಹೋದಲೂರ, ಗಂಗಾಧರ ಪಂಚಾಳ, ಮಾಣಿಕ್ ಶಾಪುರ್ಕರ್, ಮೊಹಮ್ಮದ್ ಪಟೇಲ್, ಮಂಜುಗೌಡ ಪಾಟೀಲ, ನರಸಯ್ಯ ಗುತೇದಾರ್, ಬಸವರಾಜ ಸಿದ್ದರಾಮಗೋಳ, ಅನ್ವರ್ ಪಟೇಲ್, ಮಹಾನಂದ ಪಡಶೆಟ್ಟಿ, ಮಹಾದೇವಿ ಪೂಜಾರಿ, ನಿರ್ಮಲಾ ಬಿರಾದಾರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.



