ಐನಾಪುರ ದಲಿತ ಮಹಿಳೆ ಮೇಲೆ ಹಲ್ಲೆ: 17 ಆರೋಪಿಗಳ ಬಂಧನಕ್ಕೆ ವಾರದ ಗಡುವು
ಪ್ರಕರಣ ದಾಖಲಾಗಿ ದಿನಗಳಾದರೂ ಬಂಧನವಾಗಿಲ್ಲ; ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಕಲಬುರಗಿ, ಸೆ.30: ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಐನಾಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವಿವಾಹಿತ ಮಹಿಳೆ ಶ್ರೀಮತಿ ಭಾರತಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಸಲಾಗಿರುವ 17 ಮಂದಿಯನ್ನು ಕೂಡಲೇ ಬಂಧಿಸಬೇಕು ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ದತ್ತು ಭಾಸಗಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಆರೋಪಿಗಳ ಪೈಕಿ ಯಾರನ್ನೂ ಬಂಧಿಸಿಲ್ಲ. ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಕುಟುಂಬದ ಸದಸ್ಯರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಭಾರತಿಯವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅವರ ಪತಿ ಶ್ರೀಶೈಲಗೌಡ ಪಾಟೀಲ ಅವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕುಟುಂಬದ ಹಿರಿಯ ಆಸ್ತಿಗೆ ಸಂಬಂಧಿಸಿದಂತೆ ನಾಲ್ಕು ಎಕರೆ ಜಮೀನು, ಒಂದು ಟ್ರ್ಯಾಕ್ಟರ್ ಹಾಗೂ ಯಡ್ರಾಮಿ ಪಟ್ಟಣದಲ್ಲಿ ಖಾಲಿ ನಿವೇಶನ ನೀಡಬೇಕು ಎಂಬ ವಿಚಾರವಾಗಿ ಕುಟುಂಬದ ಒಟ್ಟು 17 ಮಂದಿ ಸೇರಿಕೊಂಡು ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದತ್ತು ಭಾಸಗಿ ಆರೋಪಿಸಿದರು.
ಜಾತಿ ನಿಂದನೆ, ಜೀವ ಬೆದರಿಕೆ ಆರೋಪ
ಭಾರತಿಯವರು ಕೆಳಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಪ್ರತಿನಿತ್ಯ ಕಿರುಕುಳ ನೀಡುವುದು, ಹಲ್ಲೆ ಮಾಡುವುದು ಹಾಗೂ ಜಾತಿ ನಿಂದನೆ ಮಾಡುವುದು ನಡೆಯುತ್ತಿತ್ತು. ಅಲ್ಲದೆ, ಜೀವ ಸಹಿತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗುತ್ತಿತ್ತು ಎಂದು ಅವರು ಆರೋಪಿಸಿದರು.
ಪತಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಮಹಿಳೆ ಮೇಲೆಯೂ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಪತಿ ಬೇರೆಡೆಗೆ ತೆರಳಿದರೆ ತಮ್ಮ ಹಾಗೂ ಮಕ್ಕಳಿಗೆ ಜೀವ ಸಹಿತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ ಎಂದು ಭಾರತಿಯವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಈ ಸಂಬಂಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಹಲ್ಲೆ ನಡೆಸಿದ 17 ಮಂದಿಯ ಪೈಕಿ ಯಾರನ್ನೂ ಬಂಧಿಸಿಲ್ಲ. ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಶ್ರೀಶೈಲಗೌಡ ಪಾಟೀಲ ಹಾಗೂ ಅವರ ಕುಟುಂಬದ ಸದಸ್ಯರಿಗೆ ಆರೋಪಿಗಳಿಂದ ಜೀವ ಬೆದರಿಕೆ ಮುಂದುವರಿದಿದೆ ಎಂದು ದತ್ತು ಭಾಸಗಿ ಹೇಳಿದರು.
ರಕ್ಷಣೆ, ನ್ಯಾಯಕ್ಕೆ ಆಗ್ರಹ
ಅಂತರಜಾತಿ ವಿವಾಹಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಆದರೆ ಇಂತಹ ವಿವಾಹವಾಗಿರುವ ದಂಪತಿಗಳ ಮೇಲೆ ದೌರ್ಜನ್ಯ ನಡೆದಾಗ ಅವರಿಗೆ ಪೊಲೀಸ್ ಇಲಾಖೆಯಿಂದ ಸೂಕ್ತ ರಕ್ಷಣೆ ದೊರೆಯದಿರುವುದು ವಿಷಾದನೀಯ ಎಂದು ಅವರು ಹೇಳಿದರು.
ಪ್ರಕರಣದಲ್ಲಿ ಆರೋಪಿಸಲಾಗಿರುವ 17 ಮಂದಿಯನ್ನು ಕೂಡಲೇ ಬಂಧಿಸಬೇಕು. ಶ್ರೀಮತಿ ಭಾರತಿಯವರ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಹಾಗೂ ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕು ಎಂದು ಅವರು ಒತ್ತಾಯಿಸಿದರು.
ಒಂದು ವಾರದೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಚೇರಿ ಎದುರು ಸಂತ್ರಸ್ತ ಕುಟುಂಬದ ಸದಸ್ಯರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ದತ್ತು ಭಾಸಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸತೀಶ್ ಕಡೂನ್, ವಿಶ್ವನಾಥ ಡೇಕೂನ್, ಗೌತಮ್ ಗಣಜಲಖೇಡ, ಶ್ರೀಮತಿ ಭಾರತಿಯವರ ಪತಿ ಶ್ರೀಶೈಲಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.



