ಗಾಂಧೀಜಿ ಆದರ್ಶಗಳು ಇಂದಿನ ಯುವಕರಿಗೆ ಮಾದರಿ: ವಳಕೇರಿ

ಕಲಬುರಗಿ, ಅ.2- ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಶಾಂತಿ ಮತ್ತು ತಾಳ್ಮೆಯಿಂದ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ ಆದರ್ಶಗಳು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿವೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಹಾತ್ಮ ಗಾಂಧೀಜಿ ಗ್ರಾಮ ಪಂಚಾಯಿತಿ ನಂದಿಕೂರಿನ ಮಾಜಿ ಅಧ್ಯಕ್ಷ ಪವನಕುಮಾರ ಬಿ. ವಳಕೇರಿ ಹೇಳಿದರು.
ನಗರದ ಹೊರವಲಯದಲ್ಲಿರುವ ತೇಲ್ಕರ್ ಬಡಾವಣೆಯಲ್ಲಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆ, ಶಾಂತಿ ಹಾಗೂ ತಾಳ್ಮೆಯ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಅವರ ತ್ಯಾಗ, ಸರಳತೆ ಮತ್ತು ದೇಶಪ್ರೇಮದ ಆದರ್ಶಗಳನ್ನು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯವನ್ನು ಉಳಿಸಿ, ಮುಂದಿನ ಪೀಳಿಗೆಗೆ ಬಲಿಷ್ಠ ಭಾರತವನ್ನು ನಿರ್ಮಿಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಂಗ್ರೆಸ್ ಯುವ ನಾಯಕ ರವೀಂದ್ರ ವಿಭೂತಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರೆತಿದೆ. ಆ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಹೋಗುವ ಹೊಣೆಗಾರಿಕೆ ಯುವಕರ ಮೇಲಿದೆ. ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವಕರು ಅರಿತುಕೊಂಡು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಬೆಳೆಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ ಮಾತನಾಡಿ, ರಾಜಕೀಯ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ವ್ಯವಸ್ಥೆಯಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಮನೋಭಾವವನ್ನು ಮಹಾತ್ಮ ಗಾಂಧೀಜಿ ಹೊಂದಿದ್ದರು. ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಗಾಂಧೀಜಿ ಜಯಂತಿ ಅಂಗವಾಗಿ ನಗರದ ನಂದಿಕೂರ ತಾಂಡಾ ಹಾಗೂ ತೇಲ್ಕರ್ ಬಡಾವಣೆಯಲ್ಲಿ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯರಾದ ಮಲ್ಲಣಗೌಡ ಪಾಟೀಲ ನಂದಿಕೂರ, ರೋಷನ್ ಬಿ. ಹಮೀರಸಾಬ್ ಉತನಾಳ, ವಿಠಾಬಾಯಿ ಪಾಟೀಲ, ವಿಜಯಕುಮಾರ ಮಣಿಕರಾವ್, ಹೂವಣ್ಣಗೌಡ, ರಾಹುಲ್, ರಮೇಶ್, ಸೋನು, ತೇಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



