ಜಿಲ್ಲಾಸುದ್ದಿ

ಸ್ವಚ್ಛತೆಯೇ ಮೊದಲ ಆದ್ಯತೆಯಾಗಲಿ: ಡಾ. ರಾಜಶೇಖರ ಪಾಟೀಲ

ಕಲಬುರಗಿ, ಅ.2- ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವವಿದ್ದು, ಇಂದಿನ ಕಲುಷಿತ ವಾತಾವರಣದಲ್ಲಿ ಆರೋಗ್ಯಕರ ಜೀವನ ನಡೆಸಲು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಖ್ಯಾತ ವೈದ್ಯ ಡಾ. ರಾಜಶೇಖರ ಪಾಟೀಲ ಹೆಬಳಿ ಹೇಳಿದರು.

ನಗರದ ಪರಿವರ್ತನ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಅಂಗವಾಗಿ ಸಮಗ್ರ ಅಭಿವೃದ್ಧಿ ಸಂಸ್ಥೆ ಮತ್ತು ಹೆಡ್ ಹೆಲ್ಡ್ ಹೈ ಫೌಂಡೇಶನ್ ವತಿಯಿಂದ ವಿಶೇಷಚೇತನ ಮಕ್ಕಳಿಗೆ ಸ್ವಚ್ಛತಾ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಾ. ರಾಜಶೇಖರ ಪಾಟೀಲ ಅವರು, ವಿಶೇಷವಾಗಿ ಹೆಣ್ಣುಮಕ್ಕಳು ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸ್ವಚ್ಛತೆ ಕೇವಲ ಮನೆಯ ಪರಿಸರಕ್ಕೆ ಸೀಮಿತವಾಗಿರದೆ, ವೈಯಕ್ತಿಕ ಆರೋಗ್ಯ, ಶಾಲೆ, ಸುತ್ತಮುತ್ತಲಿನ ಪರಿಸರ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನೂ ಒಳಗೊಂಡಿದೆ. ಸ್ವಚ್ಛತೆಯ ಅಭ್ಯಾಸವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳುವುದರಿಂದ ಅನೇಕ ರೋಗಗಳಿಂದ ದೂರವಿರಲು ಸಾಧ್ಯ ಎಂದು ಅವರು ತಿಳಿಸಿದರು.

‘ಗುರು ಉಪದೇಶ’ ಪತ್ರಿಕೆಯ ಸಂಪಾದಕ ಸಿದ್ದಣ್ಣಗೌಡ ಮಾಲಿಪಾಟೀಲ ಮಾತನಾಡಿ, ದೇಶದ ಅಭಿವೃದ್ಧಿ ಹಾಗೂ ಸ್ವಚ್ಛತೆಯ ಕುರಿತು ಪ್ರತಿಯೊಬ್ಬರೂ ಜಾಗೃತಿ ಹೊಂದಿ ತಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಸ್ವಚ್ಛ ಪರಿಸರ ನಿರ್ಮಾಣದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಹೆಡ್ ಹೆಲ್ಡ್ ಹೈ ರಾಜ್ಯ ವ್ಯವಸ್ಥಾಪಕ ಕರಬಸಪ್ಪ ವಾಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಸಾಹಿತಿ ವಿಶ್ವನಾಥ ಭಕರೆ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಚ್ಛತೆಗೆ ಅವರು ಹೆಚ್ಚಿನ ಆದ್ಯತೆ ನೀಡಿದ್ದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು. ಇಂತಹ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮಂತ ರೇವೂರ ಮಾತನಾಡಿ, ವಿಶೇಷಚೇತನ ಮಕ್ಕಳು ದೇವರ ಮಕ್ಕಳಿದ್ದಂತೆ. ಅವರನ್ನು ದೇವರಂತೆ ಕಾಣುವುದು ಪಾಲಕರು ಹಾಗೂ ಪೋಷಕರ ಕರ್ತವ್ಯವಾಗಿದೆ. ಮಕ್ಕಳ ಲಾಲನೆ-ಪಾಲನೆ, ಪೋಷಣೆ, ಆರೋಗ್ಯ ಮತ್ತು ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸುವುದು ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅರವಿಂದ ಠಾಕೂರ್ ಸ್ವಾಗತಿಸಿದರು. ಬಸಮ್ಮ ಎಂ. ಗುತೇದಾರ್ ನಿರೂಪಿಸಿದರು. ರಾಹುಲ್ ವಾಡಿ ವಂದಿಸಿದರು. ಮಹೇಶ್ವರಿ ಜಿ. ಲಾಳಿ, ನಿರ್ಮಲಾ ಸನಬಂಗಿ, ನಾಗರಾಜ ಬಿರಾದಾರ್, ಶಾಲೆಯ ಸಿಬ್ಬಂದಿ ವರ್ಗ, ವಿಶೇಷಚೇತನ ಮಕ್ಕಳ ಪಾಲಕರು ಹಾಗೂ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ವಿಶೇಷಚೇತನ ಮಕ್ಕಳಿಗೆ ಸ್ವಚ್ಛತಾ ಕಿಟ್‌ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button