ನಿಜಾಮರ ವಿರುದ್ಧ ಹೋರಾಡಿದವರನ್ನು ಗೌರವಿಸುವುದು ನಮ್ಮ ಕರ್ತವ್ಯ: ಅಂಜುಂ ತಬಸ್ಸುಮ್

ಜೇವರ್ಗಿ, ಸೆ.18: ಕಲ್ಯಾಣ ಕರ್ನಾಟಕ ಭಾಗವನ್ನು ನಿಜಾಮರ ಆಳ್ವಿಕೆಯಿಂದ ಮುಕ್ತಗೊಳಿಸಿ ಭಾರತ ಒಕ್ಕೂಟಕ್ಕೆ ಸೇರಿಸಲು ಹೋರಾಡಿದ ಹೋರಾಟಗಾರರನ್ನು ಸ್ಮರಿಸಿ, ಅವರ ತ್ಯಾಗ ಹಾಗೂ ಬಲಿದಾನಗಳನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ತಹಶೀಲ್ದಾರ್ ಅಂಜುಂ ತಬಸ್ಸುಮ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸವನ್ನು ವಿವರಿಸಿದ ಅವರು, ಈ ಭಾಗದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ತ್ಯಾಗ ಮಾಡಿದ್ದಾರೆ. ಅವರ ಹೋರಾಟ ಮತ್ತು ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಪ್ರಗತಿಪರ ಚಿಂತಕ ಭಗವಂತರಾಯ ಭೇಣೂರ ಅವರು ಹೈದರಾಬಾದ್ ಕರ್ನಾಟಕ ವಿಮೋಚನೆಯ ಕುರಿತು ಉಪನ್ಯಾಸ ನೀಡಿ, ಈ ಭಾಗದ ವಿಮೋಚನಾ ಹೋರಾಟಕ್ಕೆ ಸರ್ದಾರ್ ಶರಣಗೌಡ, ಚನ್ನಬಸಪ್ಪ ಕುಲಗೆರಿ ಸೇರಿದಂತೆ ಹಲವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಗೋರ್ಟಾ ಮಾದರಿಯಲ್ಲಿ ತಾಲ್ಲೂಕಿನ ಮಳ್ಳಿ ಗ್ರಾಮದಲ್ಲಿ ರಜಾಕಾರರು 11 ಜನರನ್ನು ಏಕಕಾಲಕ್ಕೆ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯನ್ನೂ ಅವರು ಸ್ಮರಿಸಿದರು. ಪ್ರತಿವರ್ಷ ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಈ ಭಾಗಕ್ಕೆ ಆಗಮಿಸಿ ಧ್ವಜಾರೋಹಣ ನೆರವೇರಿಸುವುದರಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರುಣಾಸಾಗರ ಪತ್ತಾರ್ ಅವರು ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿ, ವಿಶ್ವಕರ್ಮರು ಜಗತ್ತು ಕಂಡ ಮಹಾನ್ ವಾಸ್ತುಶಿಲ್ಪಿ ಹಾಗೂ ವಿನ್ಯಾಸಕಾರರಾಗಿದ್ದಾರೆ. ಅವರ ಜೀವನ ಮತ್ತು ಕೊಡುಗೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಗದೀಶ್ ವಿಶ್ವಕರ್ಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಚಂದ್ರ ರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಾನಪ್ಪಗೌಡ ಹಳಿಮನಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪ್ರತಾಪ್ ಕಟ್ಟಿ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವನಗಿ, ಬಿಇಒ ವೀರಣ್ಣ ಬೊಮ್ಮನಹಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸತೀಶ್ ಸಂಗನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮೇಶ್ ಶರ್ಮಾ, ಬಿಸಿಎಂ ಇಲಾಖೆಯ ಬಸಮ್ಮ ಪಾಟೀಲ, ಪಶು ಸಂಗೋಪನೆ ಇಲಾಖೆಯ ಡಾ. ಶೋಭಾ ಸಜ್ಜನ್, ಎಡಿಎಲ್ಆರ್ ಸಿದ್ದಣ್ಣ ಹುಲಕಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಶಿಕ್ಷಕ ಗುರುಶಾಂತಪ್ಪ ಚಿಂಚೋಳಿ ನಿರೂಪಿಸಿದರು.



