ಕಲಬುರಗಿ ಮೇಯರ್–ಉಪಮೇಯರ್ ಚುನಾವಣೆ ಆಗಸ್ಟ್ 29ಕ್ಕೆ ಮುಂದೂಡಿಕೆ
ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆ; ಆಗಸ್ಟ್ 7ಕ್ಕೆ ನಿಗದಿಯಾಗಿದ್ದ ಮತದಾನ ಈಗ ಆಗಸ್ಟ್ 29ರಂದು

ಕಲಬುರಗಿ, ಆ.7: ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಆಗಸ್ಟ್ 29ಕ್ಕೆ ಮುಂದೂಡಲಾಗಿದೆ.
ಈ ಕುರಿತು ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಆದೇಶ ಹೊರಡಿಸಿದ್ದು, ಮಹಾನಗರ ಪಾಲಿಕೆ ಆಯುಕ್ತರು ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ಆಗಸ್ಟ್ 7ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಈ ಸಂಬಂಧ ಜುಲೈ 20ರಂದು ಪಾಲಿಕೆಯ ಎಲ್ಲಾ ಸದಸ್ಯರಿಗೆ ಚುನಾವಣಾ ಸಭೆಯ ನೋಟಿಸ್ ಕೂಡ ಜಾರಿಗೊಳಿಸಲಾಗಿತ್ತು.
ಆದರೆ, ರಿಟ್ ಅರ್ಜಿ ಸಂಖ್ಯೆ 200778/2026 ಸಂಬಂಧ ಕರ್ನಾಟಕ ಹೈಕೋರ್ಟ್ ಮಧ್ಯಂತರ ಅರ್ಜಿಯನ್ನು ಪರಿಗಣಿಸಿ, ಚುನಾವಣೆಯನ್ನು ಮುಂದೂಡಲು ಮಧ್ಯಂತರ ಆದೇಶ ನೀಡಿದ ಹಿನ್ನೆಲೆಯಲ್ಲಿ ಆಗಸ್ಟ್ 7ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ.
ಹೈಕೋರ್ಟ್ ನಿರ್ದೇಶನದ ಅನ್ವಯ, ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆ ಇದೀಗ ಆಗಸ್ಟ್ 29ರಂದು ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



