ಜಿಲ್ಲಾಸುದ್ದಿ

ನದಿಯಲ್ಲೇ ಟ್ರ್ಯಾಕ್ಟರ್‌ನಲ್ಲಿ ಶವ ಸಾಗಣೆ; ಸಚಿವ ಶರಣಪ್ರಕಾಶ ಪಾಟೀಲ ಕ್ಷೇತ್ರದಲ್ಲಿ ಮೂಲಸೌಕರ್ಯದ ಕೊರತೆಗೆ ಆಕ್ರೋಶ

ಮಳೆಗಾಲದಲ್ಲಿ ಕಮಲಾವತಿ ನದಿ ಉಕ್ಕಿ ಹರಿಯುತ್ತಿದ್ದರೂ ಶ್ಮಶಾನಕ್ಕೆ ಸೇತುವೆ ಇಲ್ಲ; ಟ್ರ್ಯಾಕ್ಟರ್ ಮೂಲಕ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ

ಸೇಡಂ, ಆ.7: ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಕ್ಷೇತ್ರವಾದ ಸೇಡಂನಲ್ಲಿ ಮೂಲಸೌಕರ್ಯದ ಕೊರತೆ ಮತ್ತೊಮ್ಮೆ ಬಯಲಾಗಿದೆ. ಮಳೆಗಾಲದಲ್ಲಿ ಕಮಲಾವತಿ ನದಿ ಉಕ್ಕಿ ಹರಿಯುತ್ತಿದ್ದರೂ ಶ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇಲ್ಲದ ಕಾರಣ, ಸ್ಥಳೀಯರು ಟ್ರ್ಯಾಕ್ಟರ್ ಮೂಲಕ ನದಿಯನ್ನು ದಾಟಿಸಿ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಬೇಕಾದ ಪರಿಸ್ಥಿತಿ ಎದುರಾಗಿದೆ.

ಸೇಡಂ ಪಟ್ಟಣದ ಕಮಲಾವತಿ ನದಿಯ ಪಕ್ಕದಲ್ಲೇ ಶ್ಮಶಾನ ಭೂಮಿ ಇದ್ದು, ಮಳೆ ಬಂದಾಗ ನದಿ ತುಂಬಿ ಹರಿಯುವುದರಿಂದ ಅಂತ್ಯಸಂಸ್ಕಾರ ನಡೆಸಲು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶ್ಮಶಾನಕ್ಕೆ ಸುರಕ್ಷಿತ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಪ್ರತೀ ಮಳೆಗಾಲದಲ್ಲೂ ಇದೇ ಸಮಸ್ಯೆ ಮರುಕಳಿಸುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಾಜಿ ಪುರಸಭೆ ಸದಸ್ಯ ರಾಜು ಕಾಳಗಿಕರ್ (42) ಅವರು ನಿಧನರಾದ ಹಿನ್ನೆಲೆಯಲ್ಲಿ, ಅವರ ಮೃತದೇಹವನ್ನು ಟ್ರ್ಯಾಕ್ಟರ್‌ನಲ್ಲಿ ನದಿಯನ್ನು ದಾಟಿಸಿ ಸಮುದಾಯದ ರುದ್ರಭೂಮಿಗೆ ಕೊಂಡೊಯ್ಯಲಾಯಿತು. ಬಳಿಕ ಅಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶ್ಮಶಾನಕ್ಕೆ ಶಾಶ್ವತ ಸಂಪರ್ಕ ಕಲ್ಪಿಸುವ ಸೇತುವೆ ಅಥವಾ ರಸ್ತೆ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮಳೆಗಾಲದಲ್ಲಿ ಮೃತದೇಹ ಸಾಗಿಸಲು ಸಹ ಟ್ರ್ಯಾಕ್ಟರ್ ಅವಲಂಬಿಸಬೇಕಾಗಿರುವುದು ಆಡಳಿತದ ನಿರ್ಲಕ್ಷ್ಯದ ಸಂಕೇತವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button