ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಆಗ್ರಹಿಸಿ ಆಳಂದದಿಂದ ಕಲಬುರಗಿವರೆಗೆ ಜೆಡಿಎಸ್ ಮಹಿಳಾ ಘಟಕದ ಪಾದಯಾತ್ರೆ
ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಕುಸಿದುಬಿದ್ದ ಮಹೇಶ್ವರಿ ವಾಲಿ; ಗ್ರಾಮೀಣ ಪ್ರದೇಶಗಳಲ್ಲೂ ಮಹಿಳೆಯರಿಗೆ ಶೌಚಾಲಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯ

ಕಲಬುರಗಿ, ಆ.7: ಆಳಂದ ಕ್ಷೇತ್ರದಲ್ಲಿ ಸಾರ್ವಜನಿಕ ಹಾಗೂ ಮಹಿಳಾ ಶೌಚಾಲಯಗಳ ಕೊರತೆಯನ್ನು ಖಂಡಿಸಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮರ್ಪಕ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ವಾಲಿ ನೇತೃತ್ವದಲ್ಲಿ ಆಳಂದದಿಂದ ಕಲಬುರಗಿವರೆಗೆ ಪಾದಯಾತ್ರೆ ನಡೆಸಲಾಯಿತು.
ಪಾದಯಾತ್ರೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಕಚೇರಿಗೆ ತಲುಪಿದ ವೇಳೆ ನಿರಂತರ ಕಾಲ್ನಡಿಗೆಯಿಂದ ಬಳಲಿದ್ದ ಮಹೇಶ್ವರಿ ವಾಲಿ ಅವರು ಕಚೇರಿ ಎದುರಿನ ರಾಷ್ಟ್ರಧ್ವಜ ಕಂಬದ ಬಳಿ ಅಸ್ವಸ್ಥಗೊಂಡು ಕುಸಿದುಬಿದ್ದರು. ಬಳಿಕ ಕಾರ್ಯಕರ್ತರು ಅವರನ್ನು ನೋಡಿಕೊಂಡರು. ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ವರಿ ವಾಲಿ, ಆಳಂದ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮರ್ಪಕ ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದ ತೀವ್ರ ಸಮಸ್ಯೆ ಎದುರಾಗುತ್ತಿದೆ ಎಂದು ಆರೋಪಿಸಿದರು. ಪಟ್ಟಣ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಮಹಿಳೆಯರು ಶೌಚಕ್ಕಾಗಿ ಬಯಲು ಪ್ರದೇಶಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಮಹಿಳೆಯರ ಗೌರವ ಹಾಗೂ ಸುರಕ್ಷತೆಗೆ ಧಕ್ಕೆಯಾಗಿದೆ ಎಂದು ಹೇಳಿದರು.
ಗ್ರಾಮಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮಹಿಳೆಯರು ರಸ್ತೆ ಬದಿ, ಹೊಲ-ಗದ್ದೆಗಳಿಗೆ ತೆರಳಬೇಕಾಗಿರುವ ಸ್ಥಿತಿ ಮುಂದುವರಿದಿದ್ದರೂ ಜನಪ್ರತಿನಿಧಿಗಳು ಯಾವುದೇ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅನೇಕ ಕಡೆಗಳಲ್ಲಿ ನಿರ್ಮಿಸಿರುವ ಶೌಚಾಲಯಗಳು ಜನರಿಗೆ ಅನುಕೂಲವಾಗದ ಸ್ಥಳಗಳಲ್ಲಿ ಇರುವುದರಿಂದ ಅವುಗಳ ಬಳಕೆ ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತಿದ್ದರೂ ಮೂಲಭೂತ ಅಗತ್ಯವಾದ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಸುಲಭವಾಗಿ ಬಳಸಬಹುದಾದ ಸುರಕ್ಷಿತ ಸಾರ್ವಜನಿಕ ಶೌಚಾಲಯಗಳನ್ನು ತುರ್ತಾಗಿ ನಿರ್ಮಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಪಾದಯಾತ್ರೆಯಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಾಲರಾಜ ಅಶೋಕ್ ಗುತ್ತೇದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಬಟ್ಟಿ, ಆಳಂದ ತಾಲೂಕು ಘಟಕದ ಅಧ್ಯಕ್ಷ ರಫೀಕ್ ಇನಾಂದಾರ್, ಗುರುಸ್ವಾಮಿ, ವೆಂಕಟೇಶ್ ರಾಠೋಡ್, ಸೈಫನ್ ಪಟೇಲ್, ಸೈಯದ್ ಜಾಕೀರ್, ಸಂಗಮೇಶ್ ಸಜ್ಜನ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.



