ರಾಜಕೀಯ

ವೈಜನಾಥ ಪಾಟೀಲರ ೭ನೇ ಪುಣ್ಯಸ್ಮರಣೆ: ರೈತರ ಹೋರಾಟಕ್ಕೆ ಬೆಂಬಲ

ಕಲ್ಯಾಣ ಕರ್ನಾಟಕದ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಸ್ಮರಿಸಿದ ಗಣ್ಯರು

ಕಲಬುರಗಿ, ನ. ೪: ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ವಿಶೇಷ ಸ್ಥಾನಮಾನ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ, ಪ್ರತ್ಯೇಕ ಹೈದರಾಬಾದ್ ಕರ್ನಾಟಕ ರಾಜ್ಯದ ಹೋರಾಟದ ಹರಿಕಾರ ಹಾಗೂ ಮಾಜಿ ಸಚಿವ ದಿವಂಗತ ವೈಜನಾಥ ಪಾಟೀಲ ಅವರ ೭ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಗರದಲ್ಲಿ ನಡೆಯಿತು.

ನಗರದ ರಾಮಮಂದಿರದ ಪಕ್ಕದಲ್ಲಿರುವ ವಾಲ್ಮೀಕಿ ವೃತ್ತದ ಸಮೀಪ ಸೋಮವಾರ ಸಂಜೆ ೭ ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ರೈತರ ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.

ಸಂವಿಧಾನದ ೧೭೧(೩)ನೇ ವಿಧಿಯ ತಿದ್ದುಪಡಿ ಜಾಗೃತಿ ಹೋರಾಟ ಸಮಿತಿ ಹಾಗೂ ಗೆಳೆಯರ ಬಳಗದ ವತಿಯಿಂದ ವೈಜನಾಥ ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ವಿನೋದಕುಮಾರ ಜನವೇರಿ, ಕಲ್ಯಾಣ ಕರ್ನಾಟಕದ ಹಕ್ಕುಗಳಿಗಾಗಿ ವೈಜನಾಥ ಪಾಟೀಲರು ನಡೆಸಿದ ಹೋರಾಟ ಹಾಗೂ ೩೭೧(ಜೆ) ಅನುಷ್ಠಾನಕ್ಕೆ ನೀಡಿದ ಕೊಡುಗೆ ಅಪಾರವಾದುದು. ಈ ಭಾಗದ ರೈತರು, ಯುವಕರು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳಿಗೆ ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳು ದೊರೆಯಬೇಕಾದರೆ ಹೋರಾಟದ ಮನೋಭಾವ ನಿರಂತರವಾಗಿರಬೇಕು ಎಂದರು.

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಹೋರಾಟದ ಹಿನ್ನೆಲೆ, ಉದ್ದೇಶ ಹಾಗೂ ಮುಂದಿನ ಹೋರಾಟದ ಹೆಜ್ಜೆಗಳ ಕುರಿತು ವಿವರಿಸಿದರು.

ಸಾಹಿತಿ ಚಿ.ಸಿ. ಲಿಂಗಣ್ಣ ಮಾತನಾಡಿ, ವೈಜನಾಥ ಪಾಟೀಲ ಅವರೊಂದಿಗಿನ ವಿದ್ಯಾರ್ಥಿ ಜೀವನದ ಒಡನಾಟ ಹಾಗೂ ಅವರೊಂದಿಗೆ ಎರಡು ಬಾರಿ ಜೈಲು ವಾಸ ಅನುಭವಿಸಿದ ಘಟನೆಗಳನ್ನು ಸ್ಮರಿಸಿದರು. ವೈಜನಾಥ ಪಾಟೀಲರ ಹೋರಾಟದ ಬದುಕಿನ ಅನುಭವಗಳನ್ನು ಹಂಚಿಕೊಂಡರು.

ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಸಿದ್ದು ಹಿರೇಮಠ ಸ್ವಾಗತಿಸಿದರು. ಕೊನೆಯಲ್ಲಿ ಹೋರಾಟದಲ್ಲಿ ಭಾಗವಹಿಸಿದ್ದ ರೈತ ಸಂಘದ ಮುಖಂಡರು ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button