ಧಾರ್ಮಿಕಸಾಂಸ್ಕೃತಿಕ

ಗ್ರಾಮೀಣ ಸಂಸ್ಕೃತಿಯ ಪುನರುತ್ಥಾನದಿಂದ ಮಾನವೀಯ ಸಂಬಂಧಗಳು ಸುಭದ್ರ: ರಂಭಾಪುರಿ ಜಗದ್ಗುರುಗಳು

ಶಕಾಪುರದಲ್ಲಿ ರೈತರ ರೊಟ್ಟಿ ಜಾತ್ರೆ; ಸಿರಿಧಾನ್ಯಗಳ ಮಹತ್ವ ಸಾರಿದ ಧಾರ್ಮಿಕ ಸಮಾರಂಭ

ಜೇವರ್ಗಿ, ನ. 2: ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯ ಸಂಸ್ಕೃತಿ ವಿಶಿಷ್ಟವಾದದ್ದು. ಪ್ರಾಚೀನ ಋಷಿಮುನಿಗಳು, ಆಚಾರ್ಯರು ಹಾಗೂ ಸಂತ ಮಹಾಂತರು ನೀಡಿದ ಅಮೂಲ್ಯ ವಿಚಾರಗಳಿಂದ ನಮ್ಮ ನಾಡು ಸಮೃದ್ಧವಾಗಿದೆ. ಗ್ರಾಮೀಣ ಸಂಸ್ಕೃತಿಯ ಸಂರಕ್ಷಣೆ ಮತ್ತು ಪುನರುತ್ಥಾನದಿಂದ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಲು ಸಾಧ್ಯ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಶಕಾಪುರದ ತಪೋವನ ಮಠದಲ್ಲಿ ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳ 76ನೇ ವರ್ಷದ ಪುಣ್ಯಸ್ಮರಣೆ ಹಾಗೂ ರೈತರ ರೊಟ್ಟಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಧಾರ್ಮಿಕ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳು ತಮ್ಮ ಬದುಕಿನ ಮೂಲಕ ಆಧ್ಯಾತ್ಮಿಕತೆ, ಮಾನವೀಯತೆ, ಸಮಾನತೆ, ಸೇವೆ ಮತ್ತು ಪರೋಪಕಾರದ ಮಹತ್ವವನ್ನು ಸಾರಿದ ಮಹನೀಯರು. ಅವರ ಪುಣ್ಯಸ್ಮರಣೆಯ ಅಂಗವಾಗಿ ರೈತರ ರೊಟ್ಟಿ ಜಾತ್ರೆ ಆಯೋಜಿಸಿರುವುದು ಅವರ ತತ್ವಾದರ್ಶಗಳಿಗೆ ಸಲ್ಲಿಸುವ ಅರ್ಥಪೂರ್ಣ ಗೌರವವಾಗಿದೆ ಎಂದು ತಿಳಿಸಿದರು.

ಧರ್ಮವೆಂದರೆ ಕೇವಲ ಪೂಜೆ, ಪುನಸ್ಕಾರಗಳಿಗೆ ಸೀಮಿತವಾಗಬಾರದು. ಹಸಿದವರಿಗೆ ಅನ್ನ ನೀಡುವುದು, ದುಡಿಯುವ ಕೈಗಳನ್ನು ಗೌರವಿಸುವುದು ಹಾಗೂ ಸಮಾಜದಲ್ಲಿ ಪ್ರೀತಿ ಮತ್ತು ಸಹಬಾಳ್ವೆಯನ್ನು ಬೆಳೆಸುವುದೇ ನಿಜವಾದ ಧರ್ಮ ಎಂಬ ಸಂದೇಶವನ್ನು ಇಂತಹ ಉತ್ಸವಗಳು ಸಾರುತ್ತವೆ ಎಂದರು.

ರೊಟ್ಟಿ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೋಳ, ಸಜ್ಜೆ, ರಾಗಿ, ನವಣೆ ಸೇರಿದಂತೆ ಸಿರಿಧಾನ್ಯಗಳಿಂದ ತಯಾರಿಸುವ ಆಹಾರ ಪದಾರ್ಥಗಳು ನಮ್ಮ ಪೂರ್ವಜರ ಆಹಾರ ಸಂಸ್ಕೃತಿಯ ಪ್ರತೀಕಗಳಾಗಿವೆ. ಇವು ಗ್ರಾಮೀಣ ಮಹಿಳೆಯರ ಪರಿಶ್ರಮ ಹಾಗೂ ನಮ್ಮ ನೆಲದ ಪರಂಪರೆಯ ಜೀವಂತ ಸಂಕೇತಗಳಾಗಿವೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯಲ್ಲಿ ಅನ್ನಕ್ಕೆ ಪವಿತ್ರ ಸ್ಥಾನವಿದೆ. ಅನ್ನ ಬೆಳೆಯುವ ರೈತ ಸಮಾಜದ ಜೀವನಾಡಿಯಾಗಿದ್ದಾನೆ. ರೈತರ ಶ್ರಮದ ಮಹತ್ವವನ್ನು ಜನಮಾನಸದಲ್ಲಿ ಬಿತ್ತುವ ಉದ್ದೇಶದಿಂದ ಡಾ. ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿಗಳು ರೈತರ ರೊಟ್ಟಿ ಜಾತ್ರೆಯನ್ನು ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಹಿಂದಿನ ಕಾಲದಲ್ಲಿ ಜಗದ್ಗುರು ರೇಣುಕಾಚಾರ್ಯರು ಹಸಿರು ಕ್ರಾಂತಿಯ ಮೂಲಕ ರೈತ ಸಮುದಾಯದ ಹಿತ ಮತ್ತು ಶ್ರೇಯಸ್ಸನ್ನು ಬಯಸಿದ್ದರು ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.

ಸಿರಿಧಾನ್ಯಗಳ ಆಹಾರ ಪದ್ಧತಿಗೆ ಆದ್ಯತೆ ನೀಡಿ

ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ಸಚಿವ ಡಾ. ಅಜಯ್ ಧರ್ಮಸಿಂಗ್, ಆಧುನಿಕ ಜೀವನಶೈಲಿಯ ನಡುವೆ ಸಾಂಪ್ರದಾಯಿಕ ಆಹಾರ ಪದ್ಧತಿಗಳು ನಿಧಾನವಾಗಿ ಮರೆಯಾಗುತ್ತಿವೆ. ಈ ಸಂದರ್ಭದಲ್ಲಿ ಸಿರಿಧಾನ್ಯಗಳ ಮಹತ್ವವನ್ನು ಮತ್ತೆ ಜನರಿಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.

ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಹಾಗೂ ರಾಗಿ ಮುದ್ದೆಯಂತಹ ಗ್ರಾಮೀಣ ಆಹಾರ ಪದಾರ್ಥಗಳು ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿವೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ರೈತರ ರೊಟ್ಟಿ ಜಾತ್ರೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.

ಶಕಾಪುರದಲ್ಲಿ ಡಾ. ಸಿದ್ಧರಾಮ ಶಿವಾಚಾರ್ಯರು ಆಯೋಜಿಸಿರುವ ಈ ವಿಶಿಷ್ಟ ಸಮಾರಂಭ ಇತರರಿಗೂ ಮಾದರಿಯಾಗಿದೆ. ಕೃಷಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.

ರೈತ ಉಳಿದರೆ ದೇಶ ಉಳಿಯುತ್ತದೆ

ತಪೋವನ ಮಠದ ನೇತೃತ್ವ ವಹಿಸಿರುವ ಡಾ. ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ರೈತ ಉಳಿದರೆ ದೇಶ ಉಳಿಯುತ್ತದೆ, ಕೃಷಿ ಬೆಳೆದರೆ ಸಂಸ್ಕೃತಿ ಉಳಿಯುತ್ತದೆ, ಅನ್ನ ಉಳಿದರೆ ಮಾನವೀಯತೆ ಉಳಿಯುತ್ತದೆ ಎಂಬ ಮಹತ್ವದ ಸಂದೇಶವನ್ನು ರೈತರ ರೊಟ್ಟಿ ಜಾತ್ರೆ ಸಾರುತ್ತದೆ ಎಂದು ತಿಳಿಸಿದರು.

ರೈತರನ್ನು ಗೌರವಿಸುವುದು ಅನ್ನವನ್ನು ಗೌರವಿಸಿದಂತೆ. ಮಣ್ಣನ್ನು ಗೌರವಿಸುವುದು ನಮ್ಮ ಬದುಕಿನ ಮೂಲವನ್ನು ಗೌರವಿಸಿದಂತೆ. ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಉಳಿಸುವುದು ನಮ್ಮ ಸಂಸ್ಕೃತಿಯನ್ನು ಉಳಿಸಿದಂತೆ. ಇಂತಹ ಉದಾತ್ತ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ರೈತರ ರೊಟ್ಟಿ ಜಾತ್ರೆ ನಡೆಯುತ್ತಿರುವುದು ಅಪಾರ ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ್, ಶಿವರಾಜ ಪಾಟೀಲ ರದ್ದೇವಾಡಗಿ, ಶಿವಶರಣಪ್ಪ ಸೀರಿ, ನಂದಕುಮಾರ ಝೂವಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಸೇಡಂನ ಸದಾಶಿವ ಸ್ವಾಮೀಜಿ ಹಾಗೂ ಓಂಕಾರ ಬೆಣ್ಣೂರಿನ ಸಿದ್ಧರೇಣುಕ ಶಿವಾಚಾರ್ಯರು ಭಾಗವಹಿಸಿ ನುಡಿ ನಮನ ಸಲ್ಲಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ನಡೆಯಿತು. ಜೋಡಿ ರಥೋತ್ಸವದ ಬಳಿಕ ಅನ್ನದಾಸೋಹ ನೆರವೇರಿತು. ಶ್ರೀಮತಿ ಕೇಸರಬಾಯಿ ಗಂಡ ಘನಶಾಮದಾಸ ಝೂವಾರ್ ವಿದ್ಯಾರ್ಥಿನಿಯರ ವಸತಿ ನಿಲಯದ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನಡೆಯಿತು. ಪಾಲಾ ಗುರುಮೂರ್ತಿ ಶಿವಾಚಾರ್ಯರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button