ಜೇವರ್ಗಿ, ಯಡ್ರಾಮಿ ಬರಪೀಡಿತ ಪ್ರದೇಶಕ್ಕೆ ಸಚಿವ ಡಾ. ಅಜಯಸಿಂಗ್ ಭೇಟಿ
ವಾಸ್ತವಾಂಶ ಆಧರಿಸಿ ಬರ ಘೋಷಣೆ ಕುರಿತು ನಿರ್ಧಾರ

ಜೇವರ್ಗಿ, ಆ.29: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಪರಿಶೀಲಿಸಲು ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯಸಿಂಗ್ ಶನಿವಾರ ಭೇಟಿ ನೀಡಿ, ರೈತರ ಹೊಲಗದ್ದೆಗಳಲ್ಲಿ ಸಂಚರಿಸಿ ಬೆಳೆಹಾನಿ ಹಾಗೂ ಕೃಷಿ ಪರಿಸ್ಥಿತಿಯ ವಾಸ್ತವ ಚಿತ್ರಣ ಪಡೆದುಕೊಂಡರು.
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು ಕೇವಲ ಮಳೆ ಕೊರತೆಯೊಂದನ್ನೇ ಆಧರಿಸಿ ಕೈಗೊಳ್ಳುವ ನಿರ್ಧಾರವಲ್ಲ. ಲಭ್ಯವಿರುವ ಅಧಿಕೃತ ಅಂಕಿ-ಅಂಶಗಳು ಹಾಗೂ ಕ್ಷೇತ್ರಮಟ್ಟದ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಡಾ. ಅಜಯಸಿಂಗ್ ತಿಳಿಸಿದರು.
ಬರ ಘೋಷಣೆ ಕುರಿತು ಶಾಸಕರು ಈಗಾಗಲೇ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ವಾಸ್ತವಾಂಶಗಳ ವರದಿ ಸಲ್ಲಿಸಿದ್ದಾರೆ. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಅವರು ಭರವಸೆ ನೀಡಿದರು.
ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಅಧಿಕೃತವಾಗಿ ಘೋಷಿಸಿದೆ. ಈ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಯಾವುದೇ ತಾಲೂಕು ಸ್ಥಾನ ಪಡೆಯದಿರುವುದರಿಂದ ಜಿಲ್ಲೆಯಾದ್ಯಂತ ರೈತ ಸಮುದಾಯದಲ್ಲಿ ಅಸಮಾಧಾನ ಮೂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಚಿವರು ಹೇಳಿದರು.
ಜೇವರ್ಗಿ ತಾಲೂಕಿನಲ್ಲಿ ಶೇ.53ರಷ್ಟು ಮಳೆ ಕೊರತೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಗಸ್ಟ್ 27ರ ಮಳೆ ವರದಿ ಪ್ರಕಾರ, ಜೇವರ್ಗಿ ತಾಲೂಕಿನಲ್ಲಿ ಜೂನ್ 1ರಿಂದ ಆಗಸ್ಟ್ 29ರವರೆಗೆ 393.7 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು, 184.9 ಮಿ.ಮೀ. ಮಾತ್ರ ಮಳೆಯಾಗಿದೆ. ಇದರಿಂದ ಶೇ.53ರಷ್ಟು ಮಳೆ ಕೊರತೆ ದಾಖಲಾಗಿದೆ.
ಆಗಸ್ಟ್ 1ರಿಂದ 29ರವರೆಗೆ ಜೇವರ್ಗಿ ತಾಲೂಕಿನಲ್ಲಿ ಸಾಮಾನ್ಯವಾಗಿ 144.3 ಮಿ.ಮೀ. ಮಳೆಯಾಗಬೇಕಾಗಿದ್ದರೆ, ಈ ಅವಧಿಯಲ್ಲಿ ಕೇವಲ 35.2 ಮಿ.ಮೀ. ಮಳೆಯಾಗಿದೆ. ಪರಿಣಾಮ ತಾಲೂಕಿನಲ್ಲಿ ಶೇ.76ರಷ್ಟು ಮಳೆ ಕೊರತೆ ದಾಖಲಾಗಿದೆ.
ಯಡ್ರಾಮಿ ತಾಲೂಕಿನಲ್ಲಿಯೂ ಮಳೆ ಪರಿಸ್ಥಿತಿ ಆತಂಕಕಾರಿಯಾಗಿದೆ. ಇದೇ ಅವಧಿಯಲ್ಲಿ ಸಾಮಾನ್ಯವಾಗಿ 117.2 ಮಿ.ಮೀ. ಮಳೆಯಾಗಬೇಕಾಗಿದ್ದರೂ ಕೇವಲ 36.6 ಮಿ.ಮೀ. ಮಳೆಯಾಗಿದೆ. ಇದರಿಂದ ಶೇ.69ರಷ್ಟು ಮಳೆ ಕೊರತೆ ಉಂಟಾಗಿದೆ.
ಆಗಸ್ಟ್ ತಿಂಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ನಿರಂತರ ಮಳೆ ಕೊರತೆಯಿಂದ ಹತ್ತಿ, ಹೆಸರು ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆಗೆ ತೀವ್ರ ಹೊಡೆತ ಬೀಳುವ ಸಾಧ್ಯತೆಯಿದೆ.
ಹೋಬಳಿ ಮಟ್ಟದ ಅಂಕಿ-ಅಂಶಗಳ ಪ್ರಕಾರ, ಜೇವರ್ಗಿ ಹೋಬಳಿಯಲ್ಲಿ ಶೇ.52, ಅಂದೋಲಾ ಹೋಬಳಿಯಲ್ಲಿ ಶೇ.58 ಹಾಗೂ ನೆಲೋಗಿ ಹೋಬಳಿಯಲ್ಲಿ ಶೇ.45ರಷ್ಟು ಮಳೆ ಕೊರತೆ ಕಂಡುಬಂದಿದೆ. ಯಡ್ರಾಮಿ ಹೋಬಳಿಯಲ್ಲಿ ಶೇ.44 ಹಾಗೂ ಈಜೇರಿ ಹೋಬಳಿಯಲ್ಲಿ ಶೇ.37ರಷ್ಟು ಮಳೆ ಕೊರತೆ ದಾಖಲಾಗಿದೆ.
ಬೆಳೆ ವಿಮೆ ನೋಂದಣಿಯಲ್ಲೂ ಉತ್ತಮ ಸ್ಪಂದನೆ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. 2026-27ನೇ ಸಾಲಿನ ಮುಂಗಾರು ಬೆಳೆ ವಿಮೆ ನೋಂದಣಿ ಮಾಹಿತಿಯಂತೆ ಜೇವರ್ಗಿ ತಾಲೂಕಿನಲ್ಲಿ 42,769 ಅರ್ಜಿಗಳು ಸಲ್ಲಿಕೆಯಾಗಿದ್ದು, 58,642.82 ಹೆಕ್ಟೇರ್ ಪ್ರದೇಶ ವಿಮಾ ವ್ಯಾಪ್ತಿಗೆ ಒಳಪಟ್ಟಿದೆ. ಈ ಪ್ರದೇಶಕ್ಕೆ ಒಟ್ಟು 347.44 ಕೋಟಿ ರೂ. ವಿಮಾ ಮೊತ್ತ ನಿಗದಿಯಾಗಿದೆ.
ಯಡ್ರಾಮಿ ತಾಲೂಕಿನಲ್ಲಿ 28,572 ಅರ್ಜಿಗಳು ಸಲ್ಲಿಕೆಯಾಗಿದ್ದು, 38,943.12 ಹೆಕ್ಟೇರ್ ಪ್ರದೇಶ ವಿಮಾ ವ್ಯಾಪ್ತಿಗೆ ಒಳಪಟ್ಟಿದೆ. ಒಟ್ಟು 232.76 ಕೋಟಿ ರೂ. ವಿಮಾ ಮೊತ್ತ ನಿಗದಿಯಾಗಿದ್ದು, ರೈತರ ಪಾಲು 5.92 ಕೋಟಿ ರೂ.ಗಳಾಗಿದೆ.
ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ಮಳೆ ಹಾಗೂ ಬೆಳೆ ಪರಿಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಗಮನಿಸುತ್ತಿದ್ದು, ರೈತರಿಗೆ ಅಗತ್ಯವಿರುವ ನೆರವು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ರೈತರ ಸಂಕಷ್ಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸರ್ಕಾರದ ಮುಂದೆ ರೈತರ ಹಿತವೇ ಮೊದಲ ಆದ್ಯತೆಯಾಗಿದೆ ಎಂದು ಸಚಿವ ಡಾ. ಅಜಯಸಿಂಗ್ ಸ್ಪಷ್ಟಪಡಿಸಿದರು.
ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿನ ವಾಸ್ತವ ಪರಿಸ್ಥಿತಿ, ಮಳೆ ಪ್ರಮಾಣ, ಬಿತ್ತನೆ ಮತ್ತು ಬೆಳೆ ಸ್ಥಿತಿಗತಿಗಳನ್ನು ಪರಿಗಣಿಸಿ ಮುಂದಿನ ಕ್ರಮದ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.



