ಧಾರ್ಮಿಕ

ಚಾತುರ್ಮಾಸ್ಯ ಪುಣ್ಯ ಸಾನ್ನಿಧ್ಯಕ್ಕೆ ಭಕ್ತರ ಹೆಜ್ಜೆ: ಮುದ್ದೇಬಿಹಾಳ ಕ್ಷೇತ್ರಕ್ಕೆ ಭಕ್ತಿಪೂರ್ವಕ ಯಾತ್ರೆ

ವಿದ್ಯಾಕಣವಿರಾಜ ತೀರ್ಥ ಶ್ರೀಪಾದಂಗಳವರ ದರ್ಶನ, ಆಶೀರ್ವಾದ ಪಡೆಯಲು 50ಕ್ಕೂ ಅಧಿಕ ಭಕ್ತರು ಭಾಗಿ

ಕಲಬುರಗಿ, ಆ.26- ಪಾವನ ಚಾತುರ್ಮಾಸ್ಯ ವ್ರತದ ಅಂಗವಾಗಿ ವಿದ್ಯಾಕಣವಿರಾಜ ತೀರ್ಥ ಶ್ರೀಪಾದಂಗಳವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕೈಗೊಂಡಿರುವ ಸಪ್ತಮ ಚಾತುರ್ಮಾಸ್ಯ ಸಂಕಲ್ಪದ ಹಿನ್ನೆಲೆಯಲ್ಲಿ, ಶ್ರೀಪಾದಂಗಳವರ ದರ್ಶನ ಹಾಗೂ ಶ್ರೀ ವಿಠ್ಠಲಕೃಷ್ಣನ ವಿಶೇಷ ಅನುಗ್ರಹ ಪಡೆಯಲು ಕಲಬುರಗಿ ನಗರದಿಂದ ಭಕ್ತರ ತಂಡ ಮುದ್ದೇಬಿಹಾಳಕ್ಕೆ ಭಕ್ತಿಪೂರ್ವಕ ಯಾತ್ರೆ ಕೈಗೊಂಡಿತು.

ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿ ಅಧ್ಯಕ್ಷ ಮಲ್ಲಾರರಾವ್ ಗಾರಂಪಳ್ಳಿ ಅವರು ನೇತೃತ್ವ ವಹಿಸಿ ಮಾತನಾಡಿ, ಚಾತುರ್ಮಾಸ್ಯ ವ್ರತದ ಸಾನ್ನಿಧ್ಯದಲ್ಲಿ ಶ್ರೀಪಾದಂಗಳವರ ದರ್ಶನ ಪಡೆದು ಆಶೀರ್ವಾದ ಪಡೆಯುವುದು ಭಕ್ತರಿಗೆ ಪುಣ್ಯದ ಅವಕಾಶವಾಗಿದೆ ಎಂದು ಹೇಳಿದರು.

ವಿದ್ಯಾಕಣವಿರಾಜ ತೀರ್ಥ ಶ್ರೀಪಾದಂಗಳವರು ಮುದ್ದೇಬಿಹಾಳ ಕ್ಷೇತ್ರದಲ್ಲಿ 52 ದಿನಗಳ ಕಾಲ ಚಾತುರ್ಮಾಸ್ಯ ವ್ರತ ಸಂಕಲ್ಪ ಕೈಗೊಂಡಿದ್ದಾರೆ. ಈ ಅವಧಿಯಲ್ಲಿ ಭಕ್ತರಿಗೆ ಶ್ರೀಪಾದಂಗಳವರ ದರ್ಶನ ಹಾಗೂ ಆಶೀರ್ವಾದ ಪಡೆಯುವುದರೊಂದಿಗೆ ಶ್ರೀ ವಿಠ್ಠಲಕೃಷ್ಣ ಸಂಸ್ಥಾನದ ವಿಶೇಷ ಪೂಜೆ, ಮಹಾದರ್ಶನ, ಪಾದಪೂಜೆ, ಮುದ್ರಾಧಾರಣೆ, ಸಂಜಾತ ಮತ್ತು ತುಲಾಭಾರ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.

ಬುಧವಾರ ಬೆಳಗ್ಗೆ 5 ಗಂಟೆಗೆ 50ಕ್ಕೂ ಅಧಿಕ ಯಾತ್ರಾರ್ಥಿಗಳು ಜೇವರ್ಗಿ ರಸ್ತೆಯ ಶ್ರೀರಾಮ ಮಂದಿರದಿಂದ ವಾಹನ ಪೂಜೆ ನೆರವೇರಿಸಿ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ‘ಶ್ರೀ ಸೂರ್ಯ ನಾರಾಯಣ ಭಗವಾನ್ ಕಿ ಜೈ’, ‘ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹಾರಾಜ ಕಿ ಜೈ’ ಎಂಬ ಜಯಘೋಷಗಳೊಂದಿಗೆ ಮುದ್ದೇಬಿಹಾಳ ಕ್ಷೇತ್ರದತ್ತ ಪ್ರಯಾಣ ಬೆಳೆಸಿದರು.

ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಉತ್ಸಾಹ ಹಾಗೂ ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಚಾತುರ್ಮಾಸ್ಯದಂತಹ ಪವಿತ್ರ ಧಾರ್ಮಿಕ ಸಂದರ್ಭದಲ್ಲಿ ಶ್ರೀಪಾದಂಗಳವರ ದರ್ಶನ ಪಡೆದು ಆಶೀರ್ವಾದ ಪಡೆಯುವುದರಿಂದ ಆಧ್ಯಾತ್ಮಿಕ ನೆಮ್ಮದಿ ಹಾಗೂ ಪುಣ್ಯಫಲ ದೊರೆಯಲಿದೆ ಎಂಬ ಭಾವನೆ ಭಕ್ತರಲ್ಲಿ ವ್ಯಕ್ತವಾಯಿತು.

Related Articles

Leave a Reply

Your email address will not be published. Required fields are marked *

Back to top button