ಧಾರ್ಮಿಕಸಮಾಜ

ಶರಣ ಚಳವಳಿಯ ಮುಂಚೂಣಿ ಕಾಯಕಯೋಗಿ ನುಲಿಯ ಚಂದಯ್ಯ ಜಯಂತಿಗೆ ಸಜ್ಜು

ಕಲಬುರಗಿಯಲ್ಲಿ ನಾಳೆ ನುಲಿಯ ಚಂದಯ್ಯನವರ 919ನೇ ಜಯಂತ್ಯುತ್ಸವ

ಕಲಬುರಗಿ, ಆ.26- ಕರ್ನಾಟಕ ಸರ್ಕಾರದ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕೊರಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ 12ನೇ ಶತಮಾನದ ಶರಣ ಚಳವಳಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ಕಾಯಕಯೋಗಿ, ದಾಸೋಹ ಜ್ಞಾನಿ ನುಲಿಯ ಚಂದಯ್ಯನವರ 919ನೇ ಜಯಂತ್ಯುತ್ಸವವನ್ನು ಆಗಸ್ಟ್ 28ರಂದು ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶ್ರೀಮಂತ ಜಾಧವ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನುಲಿಯ ಚಂದಯ್ಯನವರು ವಿಜಯಪುರ ಜಿಲ್ಲೆಯ ಶಿವಣಗಿಯಲ್ಲಿ ಕ್ರಿ.ಶ. 1160ರಲ್ಲಿ ಜನಿಸಿದವರು ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಶರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು ಕಾಯಕದ ಮೂಲಕ ಬಂದ ಆದಾಯದಲ್ಲಿ ದಾಸೋಹ ಮಾಡುತ್ತಿದ್ದರು. ನಂತರ ಕಲ್ಯಾಣಕ್ಕೆ ಬಂದು ಬಸವಣ್ಣನವರ ಶರಣರಾಗಿ ಸೇವೆ ಸಲ್ಲಿಸಿದ್ದರು ಎಂದು ತಿಳಿಸಿದರು.

ನುಲಿಯ ಚಂದಯ್ಯನವರ ಒಟ್ಟು 48 ವಚನಗಳು ಪ್ರಸ್ತುತ ನಮಗೆ ಲಭ್ಯವಿದ್ದು, ಅವರ ಕಾಯಕ, ದಾಸೋಹ ಹಾಗೂ ಸಾಮಾಜಿಕ ಸೇವೆಯ ಆದರ್ಶಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಅವರು ಹೇಳಿದರು.

ಅರ್ಥಪೂರ್ಣವಾಗಿ ಜಯಂತಿ ಆಚರಣೆ

ಆಗಸ್ಟ್ 28ರಂದು ನಡೆಯಲಿರುವ ಜಯಂತ್ಯುತ್ಸವ ಕಾರ್ಯಕ್ರಮವನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತೇದಾರ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಾರ್ ಅಲಂ ಖಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಶ್ರೀಮತಿ ಜಗದೀಶ್ವರಿ ಶಿವಕೇರಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಹಿರಿಯ ದಲಿತ ಮುಖಂಡರಾದ ಶಾಮ್ ನಾಟೇಕಾರ್, ಮಹಾಂತಪ್ಪ ಸಂಗಾವಿ, ಕೊರಮ ಸಮಾಜದ ಜಿಲ್ಲಾ ಅಧ್ಯಕ್ಷ ಹನಮಂತ ಭಜಂತ್ರಿ ಕರಜಗಿ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶ್ರೀಮಂತ ಜಾಧವ್ ಅಧ್ಯಕ್ಷತೆ ವಹಿಸಲಿದ್ದಾರೆ.

ಜಯಂತ್ಯುತ್ಸವದ ಅಂಗವಾಗಿ ಕೊರಮ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಲ್ಲದೆ ಸರ್ಕಾರಿ ಸೇವೆಯಿಂದ ನಿವೃತ್ತರಾದ ಸಮಾಜದ ಹಿರಿಯರನ್ನು ಸನ್ಮಾನಿಸುವ ಕಾರ್ಯಕ್ರಮವೂ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು.

ಮೆರವಣಿಗೆಗೆ ಸಿದ್ಧತೆ

ಅಂದು ಬೆಳಗ್ಗೆ 9.30ಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಲಾಗುವುದು. ಬಳಿಕ ಜಗತ್ ವೃತ್ತದಿಂದ ರಂಗಮಂದಿರದವರೆಗೆ ಸಾಂಪ್ರದಾಯಿಕ ವಾದ್ಯಗಳೊಂದಿಗೆ ನುಲಿಯ ಚಂದಯ್ಯನವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಕೊರಮ ಸಮಾಜದ ಮುಖಂಡರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀಮಂತ ಜಾಧವ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶಂಕರ ಜಾಧವ್, ಕಲ್ಯಾಣಿ ಭಜಂತ್ರಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button