ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನು ಮಂಜೂರು: ಬಂಧನದಿಂದ ಎನ್. ರವಿಕುಮಾರ್ ಬಚಾವ್
ಭವಿಷ್ಯದಲ್ಲಿ ಪ್ರಚೋದನಕಾರಿ ಅಥವಾ ದ್ವೇಷಪೂರಿತ ಹೇಳಿಕೆ ನೀಡದಂತೆ ನ್ಯಾಯಾಲಯ ಷರತ್ತು

ಕಲಬುರಗಿ, ಆ.26- ಹಿಂದಿನ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರಿಗೆ ಪಾಕಿಸ್ತಾನದಿಂದ ಬಂದವರು ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್. ರವಿಕುಮಾರ್ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಭವಿಷ್ಯದಲ್ಲಿ ಯಾವುದೇ ರೀತಿಯ ದ್ವೇಷ ಭಾಷಣ, ಪ್ರಚೋದನಕಾರಿ ಹೇಳಿಕೆ ಅಥವಾ ಆಕ್ಷೇಪಾರ್ಹ ಟೀಕೆಗಳನ್ನು ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನ್ಯಾಯಾಲಯವು 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ 10 ಸಾವಿರ ರೂ. ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ನಡೆದ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ ಎನ್. ರವಿಕುಮಾರ್ ಅವರಿಗೆ 500 ರೂ. ದಂಡವನ್ನೂ ವಿಧಿಸಲಾಗಿತ್ತು.
ಪ್ರಕರಣದ ಹಿನ್ನೆಲೆ
2025ರ ಮೇ 24ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಎನ್. ರವಿಕುಮಾರ್ ಅವರು ಮಾತನಾಡಿದ್ದರು. ಈ ವೇಳೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಕಾಂಗ್ರೆಸ್ ಸರ್ಕಾರದ ಪ್ರಭಾವಕ್ಕೆ ಒಳಗಾಗಿದ್ದಾರೆ ಹಾಗೂ ಅವರು ಪಾಕಿಸ್ತಾನದಿಂದ ಬಂದವರೋ ಅಥವಾ ಇಲ್ಲಿನ ಅಧಿಕಾರಿಯೋ ಎಂಬುದು ಗೊತ್ತಿಲ್ಲ ಎಂಬ ಅರ್ಥದ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಈ ಹೇಳಿಕೆ ಕುರಿತು ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎನ್. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದ ರವಿಕುಮಾರ್ ಅವರು ಕ್ಷಮೆಯಾಚಿಸಿದ್ದರು.
ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವುದರಿಂದ ಎನ್. ರವಿಕುಮಾರ್ ಅವರಿಗೆ ಬಂಧನದ ಭೀತಿ ತಪ್ಪಿದಂತಾಗಿದೆ.



