ಧಾರ್ಮಿಕ

ವೀರಶೈವ ದೀಕ್ಷೆಯು ಎಲ್ಲರ ಮೋಕ್ಷಕ್ಕೆ ಮಹಾದ್ವಾರ: ಶ್ರೀಶೈಲ ಜಗದ್ಗುರುಗಳು

ಲಿಂಗವು ಯಾವುದೇ ಒಂದು ಜಾತಿ ಅಥವಾ ಸಮುದಾಯದ ಕುರುಹಲ್ಲ; ಶಿವಜ್ಞಾನ ಮತ್ತು ಶಿವಧರ್ಮದ ಆಚರಣೆಯ ಸಂಕೇತ: ಶ್ರೀಶೈಲ ಜಗದ್ಗುರುಗಳು

ಜಾತಿ, ವರ್ಗ, ವರ್ಣ ಭೇದವಿಲ್ಲದೆ ಲಿಂಗದೀಕ್ಷೆ ಪಡೆಯಲು ಅವಕಾಶ: ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

ಶ್ರೀಶೈಲಂ (ಆಂಧ್ರಪ್ರದೇಶ): ವೀರಶೈವ ಲಿಂಗಾಯತ ಧರ್ಮದಲ್ಲಿ ಶ್ರೀಗುರುವು ಶಿಷ್ಯನಿಗೆ ದಯಪಾಲಿಸುವ ಲಿಂಗದೀಕ್ಷೆಯನ್ನು ಯಾವುದೇ ಜಾತಿಭೇದವಿಲ್ಲದೆ ಸರ್ವರೂ ಪಡೆದುಕೊಳ್ಳಲು ಮುಕ್ತ ಅವಕಾಶವಿರುವುದರಿಂದ ಇದು ಎಲ್ಲರ ಮೋಕ್ಷಕ್ಕೆ ಮಹಾದ್ವಾರವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ಶ್ರೀಶೈಲದ ಶ್ರೀ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ನಡೆದ ಸಾಮೂಹಿಕ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಅವರು ಮಾತನಾಡಿದರು.

ಮನುಷ್ಯನಿಗೆ ಅನಾದಿಕಾಲದಿಂದ ಆಣವ, ಮಾಯೀಯ ಮತ್ತು ಕಾರ್ಮಿಕ ಎಂಬ ಮೂರು ಪ್ರಕಾರದ ಮಲಗಳು ಆವರಿಸಿರುತ್ತವೆ. ಇವು ಮನುಷ್ಯನ ಸಾಂಸಾರಿಕ ದುಃಖ ಹಾಗೂ ಭವಬಂಧನಕ್ಕೆ ಕಾರಣವಾಗಿವೆ. ಶ್ರೀಗುರುವು ಇಷ್ಟಲಿಂಗ ದೀಕ್ಷೆ ಮತ್ತು ಅಯ್ಯಾಚಾರಗಳನ್ನು ನೀಡುವ ಸಂದರ್ಭದಲ್ಲಿ ವೇಧಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬ ಮೂರು ಪ್ರಕಾರದ ದೀಕ್ಷೆಗಳನ್ನು ದಯಪಾಲಿಸುವ ಮೂಲಕ ಆಣವಾದಿ ಮಲತ್ರಯಗಳನ್ನು ತಿರೋಹಿತಗೊಳಿಸುತ್ತಾನೆ. ಶಿವಸ್ವರೂಪವಾದ ಇಷ್ಟಲಿಂಗವನ್ನು ದೇಹದ ಮೇಲೆ ಸದಾ ಧರಿಸಿಕೊಂಡು ಪ್ರತಿನಿತ್ಯ ತಪ್ಪದೆ ಪೂಜಿಸಬೇಕು. ಸದಾಚಾರ, ಸದ್ವಿಚಾರ ಸಂಪನ್ನರಾಗಿ ನಿಷ್ಠೆಯಿಂದ ಲಿಂಗಪೂಜಾ ಮಹಾವ್ರತವನ್ನು ಪರಿಪಾಲಿಸುವ ವ್ಯಕ್ತಿಯು ಸುಲಭವಾಗಿ ಮೋಕ್ಷವನ್ನು ಪಡೆಯುತ್ತಾನೆ ಎಂದು ವಿವರಿಸಿದರು.

ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳು, ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಆಶ್ರಮಗಳು ಹಾಗೂ ಸ್ತ್ರೀ, ಪುರುಷ ಮತ್ತು ನಪುಂಸಕ ಎಂಬ ಮೂರು ಲಿಂಗಗಳಿವೆ. ಯಾವುದೇ ಜಾತಿ, ವರ್ಗ ಅಥವಾ ವರ್ಣಕ್ಕೆ ಸೇರಿದವರಾಗಿದ್ದರೂ ಶಿವನಲ್ಲಿ ಹಾಗೂ ಶಿವಧರ್ಮದ ಆಚರಣೆಯಲ್ಲಿ ಶ್ರದ್ಧೆ ಹೊಂದಿದ್ದು, ದೀಕ್ಷಿತ ನಿಯಮಗಳನ್ನು ಪಾಲಿಸಲು ಸಿದ್ಧರಿದ್ದರೆ ಗುರುವಿನಿಂದ ದೀಕ್ಷೆ ಪಡೆದು ಲಿಂಗಧಾರಣೆ ಮಾಡಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದರು.

ಲಿಂಗವು ಯಾವುದೇ ಒಂದು ಜಾತಿ ಅಥವಾ ಸಮುದಾಯದ ಕುರುಹಾಗಿರದೆ ಶಿವಜ್ಞಾನ ಮತ್ತು ಶಿವಧರ್ಮದ ಆಚರಣೆಯ ಸಂಕೇತವಾಗಿದೆ. ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿ ಪ್ರತಿನಿತ್ಯ ತಪ್ಪದೆ ಪೂಜಿಸುವವರೆಲ್ಲರೂ ವೀರಶೈವ ಲಿಂಗಾಯತರು. ಲಿಂಗಧಾರಿಗಳಾದವರೆಲ್ಲರೂ ಒಂದೇ ರೀತಿಯ ಧಾರ್ಮಿಕ ಆಚರಣೆ ಹೊಂದಿರುವುದರಿಂದ ಅವರಲ್ಲಿ ಯಾವುದೇ ರೀತಿಯ ಭೇದಭಾವ ಮಾಡಬಾರದು ಎಂದು ಹೇಳಿದರು.

ಪೂಜೆಯೊಂದಿಗೆ ಸದ್ಗುಣಗಳೂ ಅಗತ್ಯ

ಮಾಡುವ ಪೂಜೆ ಫಲಪ್ರದವಾಗಬೇಕಾದರೆ ಪರೋಪಕಾರ ಸೇರಿದಂತೆ ಲೋಕೋತ್ತರ ಗುಣಗಳನ್ನು ಅಳವಡಿಸಿಕೊಂಡಿರಬೇಕು. ಪ್ರತಿನಿತ್ಯ ಪೂಜೆ ಮಾಡುತ್ತಾ ಮನಸ್ಸಿನಲ್ಲಿ ದುರ್ಗುಣ ಹಾಗೂ ದುರಾಚಾರಗಳನ್ನು ರೂಢಿಸಿಕೊಂಡಿದ್ದರೆ ಅಂತಹ ಪೂಜೆ ಪ್ರಯೋಜನಕ್ಕೆ ಬರುವುದಿಲ್ಲ. ರಾವಣ ಮಹಾ ಶಿವಭಕ್ತನಾಗಿದ್ದರೂ, ಮಹಾ ಶಕ್ತಿವಂತನಾಗಿದ್ದರೂ ಲೋಕಕಂಟಕವಾದ ಕುಕೃತ್ಯಗಳಲ್ಲಿ ತೊಡಗಿಕೊಂಡಿದ್ದರಿಂದ ಕೊನೆಗೆ ಅವನತಿ ಹೊಂದಬೇಕಾಯಿತು ಎಂದು ಹೇಳಿದರು.

ಬದುಕು ಸಾಗಲು ಪ್ರೀತಿ ಎಷ್ಟು ಮುಖ್ಯವೋ, ಉನ್ನತಿ ಸಾಧಿಸಲು ನೀತಿಯೂ ಅಷ್ಟೇ ಮುಖ್ಯವಾಗಿದೆ ಎಂದು ಶ್ರೀಶೈಲ ಜಗದ್ಗುರುಗಳು ತಿಳಿಸಿದರು.

ಪಂಚಪೀಠಗಳು ಸನಾತನ ಕಾಲದಿಂದಲೂ ಯಾವುದೇ ತಾರತಮ್ಯವಿಲ್ಲದೆ ಸರ್ವ ಜನರಿಗೂ ಧರ್ಮದ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ನೈತಿಕ ಮಾರ್ಗದರ್ಶನವನ್ನು ನೀಡುತ್ತಾ ಬಂದಿವೆ. ಈ ನಿಟ್ಟಿನಲ್ಲಿ ಬಸವಾದಿ ಶಿವಶರಣರ ಪಾತ್ರವೂ ಅತ್ಯಂತ ಮಹತ್ವಪೂರ್ಣವಾಗಿದೆ. ಸನಾತನ ಆಚಾರ್ಯ ಪರಂಪರೆ ಹಾಗೂ ಶರಣ ಪರಂಪರೆಯನ್ನು ಸಮಾನ ಗೌರವದಿಂದ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

100ಕ್ಕೂ ಅಧಿಕ ಜಂಗಮ ವಟುಗಳಿಗೆ ಅಯ್ಯಾಚಾರ

ಜೈನಾಪುರದ ರೇಣುಕ ಶಿವಾಚಾರ್ಯ ಸ್ವಾಮಿಗಳು ದೀಕ್ಷಾರ್ಥಿಗಳು ಹಾಗೂ ವಟುಗಳಿಗೆ ಲಿಂಗದೀಕ್ಷೆ ಮತ್ತು ಅಯ್ಯಾಚಾರಗಳನ್ನು ನೀಡಿದರು. 100ಕ್ಕೂ ಅಧಿಕ ಜಂಗಮ ವಟುಗಳು ಅಯ್ಯಾಚಾರವನ್ನು ಹಾಗೂ ಅನೇಕ ಭಕ್ತರು ಲಿಂಗದೀಕ್ಷೆಯನ್ನು ಪಡೆದುಕೊಂಡರು.

ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತಾಧಿಕಾರಿ ಎಂ. ಶ್ರೀನಿವಾಸ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಶೈಲ ಪೀಠದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು. ಶ್ರೀ ಮಲ್ಲಿಕಾರ್ಜುನ ಶಾಸ್ತ್ರಿಗಳು ಮತ್ತು ಶಿವಶಂಕರ ಸ್ವಾಮಿಗಳು ದೀಕ್ಷೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಧರ್ಮೋಪದೇಶ ನೀಡಿದರು.

ಶ್ರೀಪೀಠದ ಮುಖ್ಯ ವ್ಯವಸ್ಥಾಪಕ ಎಂ.ಬಿ. ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶ್ರೀಶೈಲಂ ಜಂಗಮ ಸಮಾಜದ ಕಾರ್ಯದರ್ಶಿ ನಟರಾಜ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಹಲವಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button