ಕಲಬುರಗಿಯಲ್ಲಿ ನ.1ರಂದು ಕೋಲಿ, ಕಬ್ಬಲಿಗ ನೌಕರರ ಸಮಾವೇಶ

ಕಲಬುರಗಿ, ಅ.2– ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕೋಲಿ, ಕಬ್ಬಲಿಗ ನೌಕರರ ಸಮಾವೇಶ, ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಕೋಲಿ, ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಎಂ. ಜಮಾದಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಎಸ್‌ಇ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ನಗದು ಬಹುಮಾನ ಮತ್ತು ಅಭಿನಂದನಾ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು. ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ನೂತನ ಸದಸ್ಯರ ಗುರುತಿನ ಚೀಟಿಗಳನ್ನು ಸಮಾಜದ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ. ಶ್ರೀನಿವಾಸ್ ಬಿಡುಗಡೆ ಮಾಡುವರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಎಂ.ವೈ. ಪಾಟೀಲ್, ಬಸವರಾಜ ಮತ್ತಿಮೂಡ, ಅಲ್ಲಮಪ್ರಭು ಪಾಟೀಲ್ ಹಾಗೂ ಜಗದೇವ ಗುತ್ತೇದಾರ್ ಭಾಗವಹಿಸುವರು. ಡಾ. ಮಲ್ಲಿಕಾರ್ಜುನ ಮುಕ್ಕಾ ಹಾಗೂ ಆನಂದ್ ರಟಕಲ್ ಅತಿಥಿಗಳಾಗಿ ಆಗಮಿಸುವರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ತಿಪ್ಪಣ್ಣಪ್ಪ ಕಮಕನೂರ್, ಜವಾಹರ ಬಾಲಭವನದ ಉಪಾಧ್ಯಕ್ಷ ಅನಿಲ್ ದೇವೆಂದ್ರಪ್ಪ ಘಾಳಪ್ಪ ಜಮಾದಾರ್ ಹಾಗೂ ಮಾಲಾ ಬಿ. ನಾರಾಯಣರಾವ್ ಅವರನ್ನು ಸನ್ಮಾನಿಸಲಾಗುವುದು.
ಡಾಕ್ಟರೇಟ್ ಪದವಿ ಪಡೆದ ಸಾಧಕರು, ವಿಶೇಷ ಸಾಧನೆ ಮಾಡಿದ ನೌಕರರು ಹಾಗೂ ನಿವೃತ್ತ ನೌಕರರನ್ನು ಕೂಡ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ಕೋಲಿ, ಕಬ್ಬಲಿಗ ನೌಕರರ ವಿವಿಧ ಸಮಸ್ಯೆಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಸಲಾಗುವುದು ಎಂದು ನೀಲಕಂಠ ಜಮಾದಾರ್ ಹೇಳಿದರು.
ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಯೋಜನೆ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಮದೇವ್ ಕಡಕೋಳ್, ಧರ್ಮರಾಜ್ ಜವಳಿ, ಚಂದ್ರಕಾಂತ ತಳವಾರ್, ತುಕಾರಾಮ್ ಚಿತ್ತಾಪುರ, ಸಿದ್ದಪ್ಪ ಜಿ. ಮಹಾಗಾಂವ್, ಸಂತೋಷಕುಮಾರ್ ಬೆಳಗುಂಪಿ, ರಾಜೇಂದ್ರ ಝಳಕಿ ಹಾಗೂ ಚಂದ್ರಶೇಖರ್ ಇಟಕಾಲ್ ಉಪಸ್ಥಿತರಿದ್ದರು.



