ಧಾರ್ಮಿಕ

ವಿಐಪಿಗಳಿಗೆ ನೇರ ಪ್ರವೇಶ: ಶ್ರಾವಣ ಸೋಮವಾರ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತ ಸಾಗರ

ಸರದಿ ಸಾಲಿನಲ್ಲಿ ನಿಂತ ಸಾಮಾನ್ಯ ಭಕ್ತರಿಗೆ ತೊಂದರೆ; ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಕಲಬುರಗಿ, ಆ.17: ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಕಲಬುರಗಿಯ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ನಾಡಿನ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಬೆಳಗ್ಗೆಯಿಂದಲೇ ಭಕ್ತರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಶರಣನ ದರ್ಶನ ಪಡೆದು ಪುನೀತರಾದರು.

ಬ್ರಾಹ್ಮೀ ಮುಹೂರ್ತದಲ್ಲೇ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಭಕ್ತರು ಹಣೆಯಲ್ಲಿ ವಿಭೂತಿ ಧರಿಸಿ, ಬಿಲ್ವಪತ್ರೆ ಹಿಡಿದು ಮುಂಜಾನೆಯಿಂದಲೇ ಪೂಜಾ ಸೇವೆ ಸಲ್ಲಿಸಲು ದೇವಸ್ಥಾನಕ್ಕೆ ಆಗಮಿಸಿದ್ದರು. ಗರ್ಭಗುಡಿಯಲ್ಲಿ ವಿಶೇಷ ಅಭಿಷೇಕ, ಪೂಜೆ ಹಾಗೂ ಮಹಾಮಂಗಳಾರತಿಗಳು ನೆರವೇರಿದವು.

ಕೇವಲ ಕಲಬುರಗಿ ಜಿಲ್ಲೆಯಿಂದ ಮಾತ್ರವಲ್ಲದೆ ನೆರೆಯ ಕಲ್ಯಾಣ ಕರ್ನಾಟಕದ ಬೀದರ್, ಯಾದಗಿರಿ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಗದಗ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬೆಂಗಳೂರು ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹೊರರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.

ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಹಿನ್ನೆಲೆಯಲ್ಲಿ ಮಹಿಳಾ ಭಕ್ತರ ಸಂಖ್ಯೆಯೂ ಹೆಚ್ಚಾಗಿತ್ತು. ದೇವಸ್ಥಾನದ ಹೊರಗೋಡೆಯಲ್ಲಿರುವ ನಾಗರಹಾವಿಗೆ ಹಾಲು ಎರೆಯುವ ಮೂಲಕ ಭಕ್ತರು ಶ್ರದ್ಧಾಭಕ್ತಿ ಮೆರೆದರು. ಮಹಾದಾಸೋಹ ಸಂಸ್ಥಾನದಲ್ಲಿ ನಿತ್ಯವೂ ಅನ್ನದಾಸೋಹ ನಡೆಯುತ್ತಿದ್ದು, ಶ್ರಾವಣ ಮಾಸದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಭಕ್ತರಿಗೆ ಬಾಳೆಹಣ್ಣು, ಪೇಡಾ, ಸಿರಾ ಸೇರಿದಂತೆ ವಿವಿಧ ಪ್ರಸಾದಗಳನ್ನು ವಿತರಿಸಿದರು.

ವಿಐಪಿಗಳಿಗೆ ನೇರ ಪ್ರವೇಶ ಆರೋಪ

ದೇವಸ್ಥಾನದಲ್ಲಿ ಗಣ್ಯಾತಿಗಣ್ಯರು ಯಾವುದೇ ಸರದಿ ಸಾಲಿನಲ್ಲಿ ನಿಲ್ಲದೆ ತಮ್ಮ ಕುಟುಂಬಸ್ಥರು ಹಾಗೂ ಬೆಂಬಲಿಗರೊಂದಿಗೆ ನೇರವಾಗಿ ಗರ್ಭಗುಡಿಯೊಳಗೆ ಪ್ರವೇಶಿಸಿ ದರ್ಶನ ಪಡೆಯುತ್ತಿರುವುದರಿಂದ ಸಾಮಾನ್ಯ ಭಕ್ತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ದೇವಸ್ಥಾನದ ಆಡಳಿತ ಮಂಡಳಿಯವರು ಅಥವಾ ಅರ್ಚಕರು, ಗುಡಿ ಪೂಜಾರಿಗಳ ಬೆಂಬಲದೊಂದಿಗೆ ಗಣ್ಯರು ಯಾವುದೇ ಸರದಿಯಲ್ಲಿ ನಿಲ್ಲದೆ ನೇರವಾಗಿ ಗರ್ಭಗುಡಿ ಪ್ರವೇಶಿಸುತ್ತಿದ್ದಾರೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ದೇವಸ್ಥಾನದೊಳಗೆ ಛಾಯಾಚಿತ್ರ ತೆಗೆದುಕೊಳ್ಳುವುದಕ್ಕೆ ನಿರ್ಬಂಧವಿದ್ದರೂ ಕೆಲವರು ನಿಯಮ ಉಲ್ಲಂಘಿಸಿ ಫೋಟೊ ಹಾಗೂ ವಿಡಿಯೋ ಮಾಡಿಕೊಳ್ಳುತ್ತಿರುವುದರಿಂದ ಸಾಮಾನ್ಯ ಭಕ್ತರ ದರ್ಶನಕ್ಕೆ ತೀವ್ರ ಅಡಚಣೆಯಾಗುತ್ತಿದೆ ಎಂದು ದೂರಲಾಗಿದೆ.

ಶ್ರೀ ಶರಣಬಸಪ್ಪ ಅಪ್ಪ ಅವರು ಆಗಮಿಸಿದ ಭಕ್ತರಿಗೆ ಹೆಚ್ಚಿನ ಗೌರವ ನೀಡಿ ಆಶೀರ್ವದಿಸಿ ಕಳುಹಿಸುತ್ತಿದ್ದರೂ, ಲಿಂಗೈಕ್ಯರಾಗಿ ಮೇಲಿನ ಭಕ್ತರಿಗೆ ಕೇಳುವಂತಹ ಪರಿಸ್ಥಿತಿ ಇಲ್ಲ. ಕೇವಲ ಗಣ್ಯಾತಿಗಣ್ಯರಿಗೆ ಮಾತ್ರ ದೇವಸ್ಥಾನದ ಆಡಳಿತ ಮಂಡಳಿಯವರು ವಿಶೇಷ ಸೌಲಭ್ಯ ನೀಡುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.

ದರ್ಶನದ ಬಳಿಕ ತೀರ್ಥ ಪಡೆಯಲು ಕೂಡ ಭಕ್ತರಿಗೆ ತೊಂದರೆಯಾಗುತ್ತಿದೆ. ಭದ್ರತಾ ಸಿಬ್ಬಂದಿಯ ಮೂಲಕ ದೇವಸ್ಥಾನದ ತೀರ್ಥವನ್ನು ಪಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳಾ ಭಕ್ತೆಯೊಬ್ಬರು ಅಳಲು ತೋಡಿಕೊಂಡರು.

ಸಾಮಾನ್ಯ ಭಕ್ತರಿಗೂ ಗಣ್ಯರಂತೆ ಸಮಾನವಾಗಿ ದರ್ಶನದ ಅವಕಾಶ ಕಲ್ಪಿಸಿ, ಸರದಿ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ದೇವಸ್ಥಾನದೊಳಗೆ ನಿಯಮ ಉಲ್ಲಂಘಿಸಿ ಫೋಟೊ ಹಾಗೂ ವಿಡಿಯೋ ಮಾಡುವುದನ್ನು ತಡೆಯಬೇಕು ಎಂದು ಭಕ್ತರು ದೇವಸ್ಥಾನ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button