ವಂದೇ ಮಾತರಂ ಗೀತೆಗೆ ಅವಮಾನ ಆರೋಪ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರ ಬಂಧನ
ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ

ಕಲಬುರಗಿ, ಆ.17: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ವಂದೇ ಮಾತರಂ ಪೂರ್ಣ ಗೀತೆ ಹಾಡದೆ, ಅದನ್ನು ಅರ್ಧಕ್ಕೆ ನಿಲ್ಲಿಸುವಂತೆ ಸೂಚಿಸಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆಗೆ ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ನಗರದ ಅನ್ನಪೂರ್ಣ ಕ್ರಾಸ್ನಿಂದ ಸೇಡಂ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಕಲಬುರಗಿ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಮುಂದಾಗಿದ್ದರು. ಆದರೆ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು.
ಇದಾಗ್ಯೂ ಅನ್ನಪೂರ್ಣ ಕ್ರಾಸ್ನಲ್ಲಿ ಜಿಲ್ಲಾ ಯುವ ಬಿಜೆಪಿ ಅಧ್ಯಕ್ಷ ವೀರು ಪಾಟೀಲ್ ರಾಯಕೋಡ್ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಎರಡು ವಾಹನಗಳಲ್ಲಿ ಪ್ರತಿಭಟನಾಕಾರರನ್ನು ಕರೆದೊಯ್ದ ಪೊಲೀಸರು ಪೊಲೀಸ್ ಮೈದಾನದಲ್ಲಿ ಅವರನ್ನು ಬಿಡುಗಡೆ ಮಾಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಮುಖಂಡ ಶರಣಪ್ಪ ತಳವಾರ್, ಬಿಜೆಪಿ ಮಹಾನಗರ ಮೋರ್ಚಾದ ಶಿವು ಅಷ್ಟಗಿ, ಮಹೇಶ್ ಚವಾಣ್, ಪ್ರೀತಂ ಪಾಟೀಲ್, ಶಿವಲಿಂಗ ಪಾಟೀಲ್ ಸಾವಳಗಿ, ಚನ್ನು ಬಂಗೆ, ಶರಣು ಲೇಂಗಟಿ, ಗೋಪಾಲ ಕುಲಕರ್ಣಿ, ಸೌರಭ ರಂಗದಾಳ್, ಗ್ರಾಮೀಣ ಮೋರ್ಚಾದ ಶರಣಗೌಡ ಪಾಟೀಲ್, ಕುಮಾರ ಬಂಡೆ, ದೇವಾ ಬೆನ್ನೂರ್ ಸೇರಿದಂತೆ ಹಲವರು ಭಾಗವಹಿಸಿದ್ದರು.



