ರಾಜ್ಯ

ಕಲಬುರಗಿಯಲ್ಲಿ ಕೌಶಲ್ಯ ಪಾರ್ಕ್ ಸ್ಥಾಪನೆ: ಪರೀಕ್ಷಾ ಅಕ್ರಮ ತಡೆಗೆ ಶೀಘ್ರ ಕಠಿಣ ಕಾಯ್ದೆ ಜಾರಿ

ಯುವಕರಿಗೆ ಉದ್ಯೋಗಾಧಾರಿತ ಕೌಶಲ್ಯ, 32,177 ಮಂದಿಗೆ ಉದ್ಯೋಗಾವಕಾಶ; ಸಾರಿಗೆ, ಕೃಷಿ, ಕೈಗಾರಿಕೆ ಹಾಗೂ ನಗರಾಭಿವೃದ್ಧಿಗೆ ಆದ್ಯತೆ: ಪ್ರಿಯಾಂಕ್ ಖರ್ಗೆ

ಕಲಬುರಗಿ, ಆ.15: ನವ ಭಾರತ ನಿರ್ಮಾಣಕ್ಕೆ ಬಲಿಷ್ಠ ಯುವ ಕರ್ನಾಟಕವನ್ನು ರೂಪಿಸುವುದು ಸರ್ಕಾರದ ಸಂಕಲ್ಪವಾಗಿದ್ದು, ಯುವಕರಿಗೆ ಉದ್ಯೋಗಾಧಾರಿತ ಕೌಶಲ್ಯ ಒದಗಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ಕೌಶಲ್ಯ ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಿಗಳ ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಕಲಬುರಗಿ ವಿಭಾಗದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಎಂಎಸ್‌ಡಿಸಿ, ಜಿಟಿಟಿಸಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಸುಮಾರು ₹250 ಕೋಟಿ ಮೊತ್ತವನ್ನು ಕೌಶಲ್ಯ ಕ್ಷೇತ್ರಕ್ಕೆ ವಿನಿಯೋಗಿಸಲಾಗಿದೆ. ಯುವಜನರಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಬೆಳೆಸಲು ರಾಜ್ಯಾದ್ಯಂತ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ₹1,010 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಐತಿಹಾಸಿಕ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ 26,564 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಪ್ರಬುದ್ಧ ಅಕಾಡೆಮಿಯಲ್ಲಿ ₹10 ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಲಾಗುತ್ತಿದ್ದು, ನಿರುದ್ಯೋಗಿ ಅಭ್ಯರ್ಥಿಗಳಿಗೆ ವಸತಿ ಸಹಿತ ತರಬೇತಿ ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಉದ್ಯೋಗದ ಬಲ

ಕಳೆದ ಮೂರು ವರ್ಷಗಳಲ್ಲಿ ಬೆಳೆ ವಿಮೆ, ಅತಿವೃಷ್ಟಿ-ಅನಾವೃಷ್ಟಿ ಪರಿಹಾರ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಜಿಲ್ಲೆಯ ರೈತರಿಗೆ ಒಟ್ಟು ₹3,035 ಕೋಟಿ ಪರಿಹಾರ ನೀಡಲಾಗಿದೆ. 2026-27ನೇ ಸಾಲಿನಲ್ಲಿ 4,52,609 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, ಕಲಬುರಗಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸಚಿವರು ಹೇಳಿದರು.

ಹೈನುಗಾರಿಕೆಗೆ ಉತ್ತೇಜನ ನೀಡಲು ಕೆಕೆಆರ್‌ಡಿಬಿ ನಿಧಿಯಿಂದ ₹50 ಕೋಟಿ ವೆಚ್ಚದಲ್ಲಿ ದಿನಕ್ಕೆ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪಿಸಲಾಗುತ್ತಿದೆ. ಇದರಿಂದ ಮೂರು ಜಿಲ್ಲೆಗಳ 25 ಸಾವಿರ ಕೃಷಿ ಕುಟುಂಬಗಳಿಗೆ, ಅಂದರೆ ಸುಮಾರು 1.50 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದರು.

ರಾಜ್ಯದಲ್ಲಿ 72,186 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ 32,177 ಮಂದಿಗೆ ಉದ್ಯೋಗ ದೊರೆಯಲಿದೆ. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಶೀಘ್ರದಲ್ಲೇ ಕಠಿಣ ಕಾಯ್ದೆ ಜಾರಿಗೆ ತರಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಘೋಷಿಸಿದರು.

400 ಎಲೆಕ್ಟ್ರಿಕ್ ಬಸ್‌ಗಳಿಗೆ ಅನುಮೋದನೆ

ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಸುಧಾರಿಸಲು ₹152 ಕೋಟಿ ವೆಚ್ಚದಲ್ಲಿ 400 ಹೊಸ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಲಬುರಗಿ ನಗರದ ನಾಲ್ಕು ದಿಕ್ಕುಗಳಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದರು.

‘ಕಲ್ಯಾಣ ಪಥ’ ಯೋಜನೆಯಡಿ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ 254.66 ಕಿ.ಮೀ. ಉದ್ದದ 64 ರಸ್ತೆಗಳನ್ನು ₹226.10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ 152.60 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ 102.06 ಕಿ.ಮೀ. ರಸ್ತೆ ಕಾಮಗಾರಿಯನ್ನು ನವೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು. ‘ಪ್ರಗತಿ ಪಥ’ ಯೋಜನೆಯಡಿ ಎಂಟು ತಾಲೂಕುಗಳಲ್ಲಿ 257.775 ಕಿ.ಮೀ. ಉದ್ದದ 59 ರಸ್ತೆಗಳನ್ನು ₹185.33 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಮಾದಕ ವಸ್ತುಗಳ ವಿರುದ್ಧ ಜನಸಹಭಾಗಿತ್ವ ಅಗತ್ಯ

ಕರ್ನಾಟಕವನ್ನು ಹಾಗೂ ಕಲಬುರಗಿ ನಗರವನ್ನು ಮಾದಕ ವಸ್ತು ಮುಕ್ತಗೊಳಿಸಲು ಪೊಲೀಸ್ ಇಲಾಖೆಯಿಂದ ‘ಆಪರೇಷನ್ ರೈಸ್’ ಮತ್ತು ‘ಬೇಡ ಬ್ರೋ’ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದಿಂದ 297 ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿ 64,490 ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ದೂರವಿರುವಂತೆ ಅರಿವು ಮೂಡಿಸಲಾಗಿದೆ. ಮಾದಕ ವಸ್ತುಗಳ ನಿರ್ಮೂಲನೆ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ; ಯುವಜನತೆ, ಸಮುದಾಯ ಹಾಗೂ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ ಎಂದು ಸಚಿವರು ಮನವಿ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸೋಲಾರ್ ಮೈಕ್ರೋ ಗ್ರಿಡ್

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ ಹಾಗೂ ಸುಸ್ಥಿರ ಇಂಧನ ಬಳಕೆಗೆ ₹25 ಕೋಟಿ ವೆಚ್ಚದಲ್ಲಿ ಸೋಲಾರ್ ಮೈಕ್ರೋ ಗ್ರಿಡ್ ಸ್ಥಾಪಿಸಲಾಗುತ್ತಿದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಗಳಿಗೆ ತಲಾ ₹25ರಿಂದ ₹30 ಲಕ್ಷದಂತೆ ಒಟ್ಟು ₹80 ಕೋಟಿ ಅನುದಾನ ನೀಡಲಾಗಿದೆ. ಕಲಬುರಗಿ ನಗರದಲ್ಲಿ ₹50 ಕೋಟಿ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.

ಕಲಬುರಗಿ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ

ಕಲಬುರಗಿ ನಗರವನ್ನು ಸುಸ್ಥಿರ ಹಾಗೂ ಸ್ಮಾರ್ಟ್ ಸಿಟಿಯನ್ನಾಗಿ ರೂಪಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಸೆಪ್ಟೆಂಬರ್ 17ರಂದು ಮುಖ್ಯಮಂತ್ರಿ ನವೀಕೃತ ಅಪ್ಪ ಕೆರೆ ಸೌಂದರ್ಯೀಕರಣ ಕಾಮಗಾರಿ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ‘ಲೀಪ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಬಡಾವಣೆಗಳಲ್ಲಿ 30 ಉದ್ಯಾನವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಕಲಬುರಗಿ ಕೋಟೆ, ಮಳಖೇಡ್ ಕೋಟೆ, ಕಾಳಗಿಯ ಸೂರ್ಯನಾರಾಯಣ ದೇವಸ್ಥಾನ ಹಾಗೂ ಸನ್ನತಿ ಸೇರಿದಂತೆ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ದೇವಲ ಗಾಣಗಾಪುರ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದ್ದು, ಮೊದಲ ಹಂತದ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡಲಾಗುವುದು. ಕಲೆ, ಸಾಹಿತ್ಯ, ಪ್ರವಾಸೋದ್ಯಮ, ಕೃಷಿ, ಇಂಧನ, ಕೈಗಾರಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳ ಮೂಲಕ ನವ ಕಲಬುರಗಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಎಂದರು.

ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಭಾಗ್ಯಶ್ರೀ, ನಿಸರ್ಗ ಹಾಗೂ ಶ್ವೇತಾ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಜನಾ ಬಿ. ಪಾಟೀಲ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಅರುಣಕುಮಾರ ಅವರನ್ನು ಸನ್ಮಾನಿಸಲಾಯಿತು.

16 ತುಕಡಿಗಳಿಂದ ಆಕರ್ಷಕ ಪಥಸಂಚಲನ

ಪರೇಡ್ ಕಮಾಂಡರ್ ಡಿಎಆರ್ ಆರ್‌ಎಸ್‌ಐ ಮಲ್ಲಯ್ಯ ಹಾಗೂ ಸಹಾಯಕ ಪರೇಡ್ ಕಮಾಂಡರ್ ಡಿಎಆರ್ ಆರ್‌ಎಸ್‌ಐ ಗುರುಬಸವರಾಜ ಅವರ ನೇತೃತ್ವದಲ್ಲಿ ಡಿಎಆರ್, ಸಿಎಆರ್, ಸಿವಿಲ್ ಪೊಲೀಸ್, ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕೆಎಸ್‌ಆರ್‌ಪಿ 6ನೇ ಪಡೆ, ಗೃಹರಕ್ಷಕ ದಳ, ಅರಣ್ಯ ಪಡೆ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಎನ್‌ಸಿಸಿ ಹಾಗೂ ಅಗ್ನಿಶಾಮಕ ದಳ ಸೇರಿದಂತೆ ಒಟ್ಟು 16 ತುಕಡಿಗಳು ಆಕರ್ಷಕ ಪಥಸಂಚಲನ ನಡೆಸಿದವು. ಬಳಿಕ ಶಾಲಾ ಮಕ್ಕಳ ದೇಶಭಕ್ತಿ ಸಾರುವ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕಿ ಕನೀಜ್ ಫಾತೀಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ಹಾಗೂ ತಿಪ್ಪಣ್ಣಪ್ಪ ಕಮಕನೂರ, ವಿವಿಧ ನಿಗಮಗಳ ಅಧ್ಯಕ್ಷರು, ಜನಪ್ರತಿನಿಧಿಗಳು, ಪ್ರಾದೇಶಿಕ ಆಯುಕ್ತೆ ಜಹೀರಾ ನಸ್ಸೀಂ, ಐಜಿಪಿ ಶಾಂತನು ಸಿನ್ಹಾ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ನಗರ ಪೊಲೀಸ್ ಆಯುಕ್ತ ಎಸ್.ಡಿ. ಶರಣಪ್ಪ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಂಕನೂರು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಹಿರಿಯ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button