ಜಿಲ್ಲಾಸುದ್ದಿ

ಕಲಬುರಗಿ ನಗರದ ಸಮಗ್ರ ಅಭಿವೃದ್ಧಿಗೆ ಕುಡಾದಿಂದ ಆದ್ಯತೆ: ಮಜರ್ ಆಲಂ ಖಾನ್

80ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ; ಉದ್ಯಾನವನ, ಕ್ರೀಡಾ ಕೇಂದ್ರ, ಸೌಂದರ್ಯೀಕರಣ ಕಾಮಗಾರಿಗಳಿಗೆ ವೇಗ

ಕಲಬುರಗಿ, ಆ.15: ಕಲಬುರಗಿ ನಗರವನ್ನು ಸುಂದರ, ಸುಸಜ್ಜಿತ ಹಾಗೂ ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಬಾಕಿ ಉಳಿದಿರುವ ಯೋಜನೆಗಳಿಗೆ ವೇಗ ನೀಡಲಾಗುತ್ತಿದೆ ಎಂದು ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್ ಹೇಳಿದರು.

80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕುಡಾ ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಸೇರಿದಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಆದರ್ಶಗಳನ್ನು ಸ್ಮರಿಸಿದರು.

ಕಲಬುರಗಿ ನಗರದ ಸೌಂದರ್ಯೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಕುಡಾ ಹಲವು ಯೋಜನೆಗಳನ್ನು ಕೈಗೊಂಡಿದೆ. ಅಪ್ಪಾ ಕೆರೆಯ ಸುತ್ತಮುತ್ತಲಿನ ಪಾದಚಾರಿ ಮಾರ್ಗದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ನಗರದ ಪ್ರಮುಖ ವೃತ್ತಗಳು ಮತ್ತು ಜಂಕ್ಷನ್‌ಗಳ ಸೌಂದರ್ಯೀಕರಣ ಹಾಗೂ ಸಂಚಾರ ಸುಗಮಗೊಳಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನಾಲ್ಕು ಪ್ರಮುಖ ವೃತ್ತಗಳ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ ಎಂದು ತಿಳಿಸಿದರು.

ನಗರದ ವಿವಿಧ ಬಡಾವಣೆಗಳಲ್ಲಿ 17ರಿಂದ 18 ಉದ್ಯಾನವನಗಳು ಹಾಗೂ ಗಾರ್ಡನ್‌ಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಯುವಕರು ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ವಿವಿಧ ಪ್ರದೇಶಗಳಲ್ಲಿ ಕ್ರೀಡಾ ಸಮುದಾಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ ಫುಟ್ಬಾಲ್ ಮೈದಾನ, ವಾಲಿಬಾಲ್ ಕೋರ್ಟ್, ಸ್ಕೇಟಿಂಗ್, ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್ ಅಭ್ಯಾಸ ಜಾಲಗಳಂತಹ ಸೌಲಭ್ಯಗಳನ್ನು ಒದಗಿಸಲಾಗುವುದು. ಬಿಲಾಲಾಬಾದ್ ಕಾಲೋನಿಯಲ್ಲಿ ಫುಟ್ಬಾಲ್ ಮೈದಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಕುಸನೂರಿನಲ್ಲಿ ಸುಮಾರು 33 ಎಕರೆ ಪ್ರದೇಶದಲ್ಲಿ ಪರಿಸರ ಉದ್ಯಾನವನ ಅಭಿವೃದ್ಧಿಪಡಿಸುವ ಯೋಜನೆಯ ವಿಸ್ತೃತ ಯೋಜನಾ ವರದಿ ಅನುಮೋದನೆ ಹಂತದಲ್ಲಿದೆ. ಈ ಯೋಜನೆಯು ನಗರದ ಹಸಿರು ಪ್ರದೇಶವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ಬಹುಕಾಲದಿಂದ ಬಾಕಿ ಉಳಿದಿದ್ದ ಡಾ. ಖಮರುಲ್ ಇಸ್ಲಾಂ ಹಗರಗಾ 50:50 ವಸತಿ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ಪಡೆದು, ಪಾರದರ್ಶಕ ಲಾಟರಿ ಪ್ರಕ್ರಿಯೆ ಮೂಲಕ 769 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗದ ಫಲಾನುಭವಿಗಳಿಗೆ ಶೇ.50 ರಿಯಾಯಿತಿ ದರದಲ್ಲಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.75 ರಿಯಾಯಿತಿ ದರದಲ್ಲಿ ನಿವೇಶನಗಳನ್ನು ನೀಡಲಾಗಿದೆ. ಸುಮಾರು ₹80 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕನ್ನಿ ಮಾರುಕಟ್ಟೆಯ ಹೊಸ ತರಕಾರಿ ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಹಂತದಲ್ಲಿ ಪ್ಲಾಟ್‌ಫಾರ್ಮ್‌ಗಳು ಮತ್ತು ಅಂಗಡಿಗಳ ಹಂಚಿಕೆ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಕಲಂ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ದೊರೆತಿರುವುದು ಈ ಭಾಗದ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲಾಗಿದೆ. ಇದಕ್ಕಾಗಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆಯನ್ನು ಸ್ಮರಿಸಿದ ಮಜರ್ ಆಲಂ ಖಾನ್, ಕಲಬುರಗಿ ನಗರದ ಅಭಿವೃದ್ಧಿಗೆ ವಿವಿಧ ಜನಪ್ರತಿನಿಧಿಗಳ ಸಹಕಾರವೂ ಮಹತ್ವದ್ದಾಗಿದೆ ಎಂದರು.

ಕರ್ನಾಟಕದ ಗೃಹ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕುಡಾದ ಹಲವು ಬಾಕಿ ಕಾಮಗಾರಿಗಳಿಗೆ ವೇಗ ದೊರೆತಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕಣೀಜ್ ಫಾತಿಮಾ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಸಹಕಾರವನ್ನು ಸ್ಮರಿಸಿದರು.

ಕುಡಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರಂತರ ಪರಿಶ್ರಮದಿಂದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಕಲಬುರಗಿಯನ್ನು ಇನ್ನಷ್ಟು ಸುಂದರ, ಸುಸಜ್ಜಿತ ಹಾಗೂ ಅಭಿವೃದ್ಧಿ ಹೊಂದಿದ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವೇಗಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button