ಆಗಸ್ಟ್ 11ರಂದು ಕಲಬುರಗಿಯಲ್ಲಿ ಅರ್ಹ ಫಲಾನುಭವಿಗಳ ಬೃಹತ್ ರ್ಯಾಲಿ
ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ವಿಳಂಬ ಖಂಡನೆ; ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಗೆ ಕರೆ

ಕಲಬುರಗಿ, ಆ.7: ಸಾಮಾಜಿಕ ಭದ್ರತಾ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಮಾಸಾಶನ ವಿತರಣೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಆಗಸ್ಟ್ 11ರಂದು ಮಧ್ಯಾಹ್ನ 1 ಗಂಟೆಗೆ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮೂಲನಿವಾಸಿ ಸಂಘಟನೆಗಳ ಒಕ್ಕೂಟದ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಮಾರೂತಿ ಗಂಜಗಿರಿ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ನೂರಾರು ಅಂಗವಿಕಲರು, ವೃದ್ಧರು, ವಿಧವೆಯರು, ವಿವಿಧ ಗ್ರಾಮಗಳ ಸಾರ್ವಜನಿಕರು, ಮಹಿಳೆಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಚಿಂಚೋಳಿ ತಾಲ್ಲೂಕಿನಾದ್ಯಂತ ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಇತರ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವ ಸಾವಿರಾರು ಅರ್ಹ ಫಲಾನುಭವಿಗಳು ಅಧಿಕಾರಿಗಳ ನಿರ್ಲಕ್ಷ್ಯ, ಸಮರ್ಪಕ ಪರಿಶೀಲನೆಯ ಕೊರತೆ ಮತ್ತು ಆಡಳಿತಾತ್ಮಕ ಲೋಪಗಳಿಂದ ಹಲವು ತಿಂಗಳುಗಳಿಂದ ಮಾಸಾಶನದಿಂದ ವಂಚಿತರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಸರ್ಕಾರ ದುರ್ಬಲ ವರ್ಗಗಳ ಆರ್ಥಿಕ ಭದ್ರತೆಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಅವುಗಳ ಅನುಷ್ಠಾನದಲ್ಲಿ ಗಂಭೀರ ನಿರ್ಲಕ್ಷ್ಯ ಕಂಡುಬಂದಿದೆ. ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಮಂಜೂರು ಮಾಡುತ್ತಿರುವುದರಿಂದ ಅನೇಕ ದೋಷಗಳು ಉಂಟಾಗಿವೆ ಎಂದು ಅವರು ಹೇಳಿದರು.
ಒಂದೇ ಯೋಜನೆಯ ಫಲಾನುಭವಿಗಳಿಗೆ ಮತ್ತೊಮ್ಮೆ ಮಂಜೂರಾತಿ ನೀಡಿರುವ ಪ್ರಕರಣಗಳೂ ಬೆಳಕಿಗೆ ಬಂದಿದ್ದು, ನಿಜವಾದ ಅರ್ಹರಿಗೆ ಹಲವು ತಿಂಗಳುಗಳಿಂದ ಮಾಸಾಶನ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅರ್ಜಿಗಳ ಪರಿಶೀಲನೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದರು.
ಮಾಸಾಶನವೇ ಜೀವನಾಧಾರವಾಗಿರುವ ವೃದ್ಧರು, ಅಂಗವಿಕಲರು ಹಾಗೂ ವಿಧವೆಯರು ಆದಾಯವಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಔಷಧಿ, ಆಹಾರ ಹಾಗೂ ದೈನಂದಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಚಿಂಚೋಳಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ವಿಶೇಷ ಮರುಪರಿಶೀಲನಾ ಶಿಬಿರಗಳನ್ನು ಆಯೋಜಿಸಿ, ಸ್ಥಳದಲ್ಲೇ ದಾಖಲೆ ಪರಿಶೀಲನೆ ನಡೆಸಿ ಅರ್ಹರಿಗೆ ತಕ್ಷಣ ಮಂಜೂರಾತಿ ಆದೇಶ ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ಹಲವು ತಿಂಗಳುಗಳಿಂದ ಬಾಕಿ ಉಳಿದಿರುವ ಎಲ್ಲಾ ಮಾಸಾಶನವನ್ನು ಕೂಡಲೇ ಬಿಡುಗಡೆ ಮಾಡಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ತಪ್ಪಾಗಿ ಮಂಜೂರಾಗಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಅರ್ಜಿಗಳ ಪರಿಶೀಲನಾ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಿ, ಅರ್ಜಿಯ ಪ್ರಗತಿ ಕುರಿತು ಫಲಾನುಭವಿಗಳಿಗೆ ಎಸ್ಎಂಎಸ್ ಸೇರಿದಂತೆ ಅಧಿಕೃತ ಮಾಹಿತಿ ವ್ಯವಸ್ಥೆ ಜಾರಿಗೊಳಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಬಾಕಿ ಇರುವ ಅರ್ಜಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶರಣಮ್ಮ ಗಂಡ ದೇವೇಂದ್ರಪ್ಪ, ಚಂದ್ರಕಾಂತ ಪಾಸ್ಟರ್, ಸಿಸ್ಟರ್ ಮರಿಯಾನ್, ಮೋಹನ್ ಐನಾಪುರ, ನಾಗಪ್ಪ ತಂದೆ ನಿಂಗಪ್ಪ, ಮಹೇಶ್ ರಾಣಪುರ, ಪಾರ್ವತಿ, ಮಾರೂತಿ ಜಾಧವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



