ಜಿಲ್ಲಾಸುದ್ದಿ

ಸ್ವಾತಂತ್ರ್ಯವೆಂದರೆ ಪರಕೀಯರ ಆಳ್ವಿಕೆಯಿಂದ ಮುಕ್ತಿ ಮಾತ್ರವಲ್ಲ: ಡಾ. ದಾಕ್ಷಾಯಿಣಿ ಅಪ್ಪ

ಸಂವಿಧಾನದ ಮೌಲ್ಯ ಗೌರವಿಸಿ, ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು

ಕಲಬುರಗಿ, ಆ.15: ಸ್ವಾತಂತ್ರ್ಯವೆಂದರೆ ಕೇವಲ ಪರಕೀಯರ ಆಳ್ವಿಕೆಯಿಂದ ಮುಕ್ತಿ ಪಡೆಯುವುದಲ್ಲ. ದೇಶದ ಜವಾಬ್ದಾರಿಯುತ ನಾಗರಿಕರಾಗುವುದು, ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದು, ಎಲ್ಲರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ದೇಶದ ಅಭಿವೃದ್ಧಿಗೆ ನಮ್ಮದೇ ಆದ ಕೊಡುಗೆ ನೀಡುವುದೇ ನಿಜವಾದ ಸ್ವಾತಂತ್ರ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ದಾಕ್ಷಾಯಿಣಿ ಎಸ್. ಅಪ್ಪ ಹೇಳಿದರು.

ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಾರರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು. ಇಂದಿನ ವಿದ್ಯಾರ್ಥಿಗಳ ಕೈಯಲ್ಲೇ ಭಾರತದ ಭವಿಷ್ಯವಿದ್ದು, ಶಿಕ್ಷಣ, ಶಿಸ್ತು, ಪ್ರಾಮಾಣಿಕತೆ, ಪರಿಶ್ರಮ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಕಲೆ, ಸಾಹಿತ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ಯುವಜನತೆ ತಮ್ಮ ಪ್ರತಿಭೆ ಹಾಗೂ ಕೌಶಲ್ಯವನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದರು.

ಜಾತಿ, ಧರ್ಮ, ಭಾಷೆ ಹಾಗೂ ಪ್ರಾಂತ್ಯದ ಭೇದಗಳನ್ನು ಮರೆತು ‘ನಾವೆಲ್ಲರೂ ಭಾರತೀಯರು’ ಎಂಬ ಭಾವನೆಯೊಂದಿಗೆ ಒಂದಾಗಿ ಸಾಗಬೇಕು. ಸ್ವಚ್ಛ ಭಾರತ, ಶಕ್ತಿಶಾಲಿ ಭಾರತ, ಜ್ಞಾನವಂತ ಭಾರತ ಹಾಗೂ ಸಮಾನತೆಯ ಭಾರತ ನಿರ್ಮಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ಡಾ. ದಾಕ್ಷಾಯಿಣಿ ಅಪ್ಪ ಹೇಳಿದರು.

ನಮ್ಮ ರಾಷ್ಟ್ರಧ್ವಜವು ಏಕತೆ, ಶಾಂತಿ ಹಾಗೂ ಧೈರ್ಯದ ಸಂದೇಶವನ್ನು ನೀಡುತ್ತದೆ. ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್. ಅಪ್ಪ ಹಾಗೂ ಕು. ಭವಾನಿ ಎಸ್. ಅಪ್ಪ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ, ಆಡಳಿತಾಧಿಕಾರಿ ಡಾ. ಅಲ್ಲಮಪ್ರಭು ದೇಶಮುಖ ಉಪಸ್ಥಿತರಿದ್ದರು.

ಶರಣಬಸವೇಶ್ವರ ದೇವಸ್ಥಾನ ಆವರಣದ ವಿವಿಧ ಶಾಲಾ-ಕಾಲೇಜುಗಳ ನಿರ್ದೇಶಕರು, ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Related Articles

Leave a Reply

Your email address will not be published. Required fields are marked *

Back to top button