ರಾಜ್ಯ

ಅರವಿಂದ್ ಚವ್ಹಾಣ್ ವಿರುದ್ಧ ರಾಜಕೀಯ ಷಡ್ಯಂತ್ರ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಆತ್ಮಹತ್ಯೆ ಪ್ರಕರಣದಲ್ಲಿ ಪೂರ್ವಗ್ರಹ ಬೇಡ; ರಾಜಕೀಯ ಒತ್ತಡವಿಲ್ಲದೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯ

ಕಲಬುರಗಿ, ಆ.7: ಸೆಂಟ್ರಿಂಗ್ ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಅರವಿಂದ್ ಚವ್ಹಾಣ್ ಅವರನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಈ ಕುರಿತು ಯಾವುದೇ ರಾಜಕೀಯ ಒತ್ತಡವಿಲ್ಲದೆ ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಬೇಕು ಎಂದು ಚಿತ್ತಾಪುರ ತಾಲೂಕು ಬಂಜಾರ ಸಮಾಜದ ಮುಖಂಡ ಜಗದೀಶ್ ಚವ್ಹಾಣ್ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ್ ಚವ್ಹಾಣ್ ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆ ಸಲ್ಲಿಸಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ಸತ್ಯಾಸತ್ಯತೆಯನ್ನು ಸಮಗ್ರವಾಗಿ ಪರಿಶೀಲಿಸಬೇಕೇ ಹೊರತು, ಊಹಾಪೋಹಗಳ ಆಧಾರದ ಮೇಲೆ ತೀರ್ಮಾನಕ್ಕೆ ಬರಬಾರದು ಎಂದು ಹೇಳಿದರು.

ಪ್ರಕರಣ ಬೆಳಕಿಗೆ ಬಂದ ತಕ್ಷಣ ಅರವಿಂದ್ ಚವ್ಹಾಣ್ ಅವರೊಂದಿಗೆ ಮಾತನಾಡಿದ್ದೇವೆ. ಮೃತ ವ್ಯಕ್ತಿಯೊಂದಿಗೆ ಅವರು ಯಾವುದೇ ರೀತಿಯ ಸಂಪರ್ಕ ಹೊಂದಿರಲಿಲ್ಲ, ದೂರವಾಣಿ ಸಂಭಾಷಣೆಯೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅವರು ಸಾರ್ವಜನಿಕವಾಗಿ ವಿಡಿಯೊ ಮೂಲಕವೂ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಪ್ರಕರಣದ ಎಲ್ಲ ಆಯಾಮಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕು. ರಾಜಕೀಯ ದ್ವೇಷ ಅಥವಾ ವೈಯಕ್ತಿಕ ಹಿತಾಸಕ್ತಿಯಿಂದ ಅರವಿಂದ್ ಚವ್ಹಾಣ್ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆಯೇ ಎಂಬ ಅಂಶವನ್ನೂ ತನಿಖೆಯಲ್ಲಿ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಅಗತ್ಯವಿದ್ದರೆ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸಬೇಕು. ಯಾವುದೇ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ ಮಾತ್ರ ಅವರು ಅಪರಾಧಿ ಆಗುವುದಿಲ್ಲ. ಪ್ರತಿಯೊಬ್ಬರಿಗೂ ನ್ಯಾಯಸಮ್ಮತ ತನಿಖೆ ಮತ್ತು ನ್ಯಾಯಾಲಯದಲ್ಲಿ ತಮ್ಮ ನಿರ್ದೋಷಿತ್ವವನ್ನು ಸಾಬೀತುಪಡಿಸಿಕೊಳ್ಳುವ ಹಕ್ಕು ಸಂವಿಧಾನ ನೀಡಿದೆ ಎಂದು ಹೇಳಿದರು.

ಪೊಲೀಸರು ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಕ್ಕೆ ಮಣಿಯದೆ, ಪ್ರಕರಣದ ಕುರಿತು ಸಂಪೂರ್ಣ ಪಾರದರ್ಶಕ ತನಿಖೆ ನಡೆಸಬೇಕು. ಅರವಿಂದ್ ಚವ್ಹಾಣ್ ಬಿಡುಗಡೆ ಮಾಡಿರುವ ವಿಡಿಯೊ ಸೇರಿದಂತೆ ಕರೆ ವಿವರಗಳು, ಡಿಜಿಟಲ್ ದಾಖಲೆಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಪರಿಶೀಲಿಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಯಾವುದೇ ನಿರಪರಾಧಿಯ ವಿರುದ್ಧ ಸುಳ್ಳು ಆರೋಪ ಅಥವಾ ದುರುದ್ದೇಶಪೂರಿತ ಪ್ರಕರಣ ದಾಖಲಾಗಿರುವುದು ತನಿಖೆಯಲ್ಲಿ ಸಾಬೀತಾದರೆ, ಅದಕ್ಕೆ ಕಾರಣರಾದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನ್ಯಾಯಾಲಯದ ಅಂತಿಮ ತೀರ್ಪು ಬರುವ ಮುನ್ನ ಯಾರನ್ನೂ ಅಪರಾಧಿಯೆಂದು ಬಿಂಬಿಸುವುದು ಸರಿಯಲ್ಲ. ಜನರು ವದಂತಿಗಳಿಗೆ ಕಿವಿಗೊಡದೆ ಸತ್ಯ ಹಾಗೂ ನ್ಯಾಯದ ಪರ ನಿಲ್ಲಬೇಕು. ಸತ್ಯಕ್ಕೆ ತಾತ್ಕಾಲಿಕವಾಗಿ ವಿಳಂಬವಾಗಬಹುದು, ಆದರೆ ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ಜಗದೀಶ್ ಚವ್ಹಾಣ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚಂದು ಜಾಧವ್, ಭೋರು ರಾಠೋಡ್, ವಿಜಯಕುಮಾರ್, ಶಿವರಾಮ್ ಪವಾರ್, ರವಿ ರಾಠೋಡ್, ಮುಖೇಶ್ ರಾಠೋಡ್, ಅವಿನಾಶ್ ಅರಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button