ಸೆಪ್ಟೆಂಬರ್ 24ರಿಂದ ಕಲಬುರಗಿ ಸ್ಪೋರ್ಟ್ಸ್ ಹಬ್ಬ-2026
ಯುವ ಪ್ರತಿಭೆಗಳಿಗೆ ವೇದಿಕೆ; ಏಳು ಕ್ರೀಡೆಗಳೊಂದಿಗೆ ಮೂರು ದಿನಗಳ ಕ್ರೀಡಾ ಸಂಭ್ರಮ

ಕಲಬುರಗಿ, ಆ.15: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸೆಪ್ಟೆಂಬರ್ 24, 25 ಮತ್ತು 26ರಂದು ಬೃಹತ್ ಕಲಬುರಗಿ ಸ್ಪೋರ್ಟ್ಸ್ ಹಬ್ಬ-2026 ಆಯೋಜಿಸಲಾಗಿದೆ ಎಂದು ರಾಜ್ಯದ ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಚೇರಿಯ ಅರಿವು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಬುರಗಿ ಸ್ಪೋರ್ಟ್ಸ್ ಕಾರ್ನಿವಲ್-2026ರ ಲೋಗೋ ಹಾಗೂ ವಿಡಿಯೋ ಅನಾವರಣಗೊಳಿಸಿ ಅವರು ಮಾತನಾಡಿದರು.
ಕ್ರೀಡಾ ಹಬ್ಬದಲ್ಲಿ ಫುಟ್ಬಾಲ್, ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್ ಹಾಗೂ ಮ್ಯಾರಥಾನ್ ಸೇರಿದಂತೆ ಒಟ್ಟು ಏಳು ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಸ್ಪ್ರೆಂಜೋ ಸಂಸ್ಥೆ ಹಾಗೂ ಸ್ಥಳೀಯ ಕ್ರೀಡಾ ಅಸೋಸಿಯೇಷನ್ಗಳ ಸಹಯೋಗದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಜಿಲ್ಲೆಯ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದರು.
ಆಸಕ್ತ ಕ್ರೀಡಾಪಟುಗಳು ಡಿಜಿಟಲ್ ವೇದಿಕೆಯ ಮೂಲಕ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಪಂದ್ಯಾವಳಿಗಳ ನಿರ್ವಹಣೆ, ವೇಳಾಪಟ್ಟಿ, ನೈಜ ಸಮಯದ ನೇರ ಅಂಕಿ-ಅಂಶಗಳು ಹಾಗೂ ಫಲಿತಾಂಶಗಳು ಆನ್ಲೈನ್ನಲ್ಲಿ ಲಭ್ಯವಿರಲಿವೆ. ಸಾರ್ವಜನಿಕರು ಕ್ರೀಡಾಕೂಟಗಳನ್ನು ನೇರವಾಗಿ ವೀಕ್ಷಿಸಲು ಫ್ಯಾನ್ ಝೋನ್ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಲಬುರಗಿ ನೆಕ್ಸ್ಟ್ ಫೌಂಡೇಷನ್ಗೆ ₹3.5 ಕೋಟಿ ದೇಣಿಗೆ
ಜಿಲ್ಲೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಕ್ರೀಡಾ ಕ್ಷೇತ್ರದ ಪ್ರಗತಿಗಾಗಿ ಸ್ಥಾಪಿಸಲಾಗಿರುವ ಕಲಬುರಗಿ ನೆಕ್ಸ್ಟ್ ಫೌಂಡೇಷನ್ಗೆ ಈಗಾಗಲೇ ಸುಮಾರು ₹3.5 ಕೋಟಿ ದೇಣಿಗೆ ಸಂಗ್ರಹವಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಯುವಶಕ್ತಿ ಹಾಗೂ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ. ದೇಶದಲ್ಲೇ ಪ್ರಥಮ ಬಾರಿಗೆ ಇಂತಹ ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದರು.
ಕ್ರೀಡಾ ಮೂಲಸೌಕರ್ಯಕ್ಕೆ ₹20 ಕೋಟಿ
ಜಿಲ್ಲೆಯಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ₹20 ಕೋಟಿ ವೆಚ್ಚದಲ್ಲಿ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಈಗಾಗಲೇ ಸ್ಪೋರ್ಟ್ಸ್ ಸಿಟಿಯ ನೀಲನಕ್ಷೆ ಸಿದ್ಧಗೊಂಡಿದೆ. ಮಹಿಳೆಯರಿಗಾಗಿ ಪ್ರತ್ಯೇಕವಾಗಿ ನಿರ್ಮಿಸಲಾಗುತ್ತಿರುವ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಪ್ರತಿ ವರ್ಷ ರಾಜ್ಯ ಮಟ್ಟದ ಕ್ರೀಡಾ ಒಕ್ಕೂಟಗಳ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಬೃಹತ್ ಕ್ರೀಡಾಕೂಟಗಳನ್ನು ನಿಯಮಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ವೃತ್ತಿಪರ ಕ್ರೀಡಾ ನಿರ್ವಹಣೆ, ಡಿಜಿಟಲ್ ತಂತ್ರಜ್ಞಾನ, ನೇರ ಪ್ರಸಾರ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಒಟ್ಟುಗೂಡಿಸುವ ಮೂಲಕ ಕಲಬುರಗಿಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೊಸ ಮಾದರಿ ರೂಪಿಸುವುದು ಈ ಕ್ರೀಡಾ ಹಬ್ಬದ ಉದ್ದೇಶವಾಗಿದೆ ಎಂದರು.
ಕಲಬುರಗಿ ಜಿಲ್ಲೆಯನ್ನು ಪ್ರಮುಖ ಕ್ರೀಡಾ ಕೇಂದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ಸ್ಪೋರ್ಟ್ಸ್ ಕಾರ್ನಿವಲ್-2026 ಮಹತ್ವದ ಹೆಜ್ಜೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ನಗರ ಪೊಲೀಸ್ ಆಯುಕ್ತ ಎಸ್.ಡಿ. ಶರಣಪ್ಪ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಸಂಕನೂರ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿಡಿಪಿಐ ಶಂಕರಂ ಢವಳಗಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.



