ಜಿಲ್ಲಾಸುದ್ದಿಶಿಕ್ಷಣ

70 ಶಾಲೆಗಳಿಗೆ 700 ಪೇಪರ್‌ಟ್ರಾನಿಕ್ಸ್ ಕಿಟ್ ವಿತರಣೆ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ ಬೆಳೆಸಲು ಕ್ರಮ

‘ಮಾಡುತ್ತಾ ಕಲಿಯುವ’ ಮೂಲಕ ಎಲೆಕ್ಟ್ರಾನಿಕ್ಸ್ ಜ್ಞಾನ, ಸೃಜನಶೀಲತೆ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯ ವೃದ್ಧಿ: ಪ್ರಿಯಾಂಕ್ ಖರ್ಗೆ

ಕಲಬುರಗಿ, ಆ.25: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಪ್ರಾಯೋಗಿಕ ಕಲಿಕೆ ಹಾಗೂ ಮೂಲಭೂತ ಎಲೆಕ್ಟ್ರಾನಿಕ್ಸ್ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಜಿಲ್ಲೆಯ ಶಾಲಾ ಮಕ್ಕಳಿಗೆ ಪೇಪರ್‌ಟ್ರಾನಿಕ್ಸ್ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಚೇರಿಯ ಅರಿವು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಕಲಬುರಗಿ ಸ್ಪೋರ್ಟ್ಸ್ ಹಬ್ಬದ ಲೋಗೊ ಮತ್ತು ವಿಡಿಯೋ ಅನಾವರಣ ಹಾಗೂ ಪೇಪರ್‌ಟ್ರಾನಿಕ್ಸ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದೊಂದಿಗೆ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಪೇಪರ್‌ಟ್ರಾನಿಕ್ಸ್ ಕಿಟ್ ಯೋಜನೆ ರೂಪಿಸಲಾಗಿದೆ. ಇದರ ಮೊದಲ ಹಂತವಾಗಿ 70 ಶಾಲೆಗಳಿಗೆ 700 ಪೇಪರ್‌ಟ್ರಾನಿಕ್ಸ್ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹಾಗೂ ಸಮಸ್ಯೆ ಪರಿಹರಿಸುವ ಕೌಶಲ್ಯ ಬೆಳೆಸಲು ಈ ಕಿಟ್‌ಗಳು ನೆರವಾಗಲಿವೆ ಎಂದರು.

ಕೇವಲ ಪುರಾಣ ಮತ್ತು ಸಂಸ್ಕೃತಿಯ ಜ್ಞಾನಕ್ಕೆ ಸೀಮಿತವಾಗದೆ, ಇಂದಿನ ಕಾಲಕ್ಕೆ ಅಗತ್ಯವಿರುವ ವೈಜ್ಞಾನಿಕ ದೃಷ್ಟಿಕೋನವನ್ನೂ ಪ್ರತಿಯೊಬ್ಬ ವಿದ್ಯಾರ್ಥಿ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಮನೋಭಾವ ಬೆಳೆಸುವುದು ಸಂವಿಧಾನಾತ್ಮಕ ಕರ್ತವ್ಯವೂ ಆಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

21 ವಿಜ್ಞಾನ ಕೇಂದ್ರಗಳ ಮೂಲಕ ಮಕ್ಕಳಿಗೆ ತರಬೇತಿ

ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಗೀತಾ ಪಾಟೀಲ ಮಾತನಾಡಿ, ದೇಶದ 23 ರಾಜ್ಯಗಳು ಹಾಗೂ ಕರ್ನಾಟಕದ 28 ಜಿಲ್ಲೆಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ 21 ವಿಜ್ಞಾನ ಕೇಂದ್ರಗಳ ಮೂಲಕ ಮಕ್ಕಳಲ್ಲಿ ಕುತೂಹಲ ಹಾಗೂ ಸೃಜನಶೀಲತೆ ಬೆಳೆಸುವ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಪ್ರಯೋಗಗಳ ಮೂಲಕ ಕಲಿಯುವಿಕೆಯನ್ನು ಉತ್ತೇಜಿಸಲು ‘ಆ, ಆಹಾ, ಹಾಹಾ’ ಎಂಬ ಪರಿಕಲ್ಪನೆಯಡಿ ಚಟುವಟಿಕೆಗಳನ್ನು ರೂಪಿಸಲಾಗಿದೆ. ಸರಳ ವಿದ್ಯುತ್, ಸರಣಿ ಹಾಗೂ ಸಮಾಂತರ ಸಂಪರ್ಕ ಸೇರಿದಂತೆ ಮೂಲಭೂತ ವಿಜ್ಞಾನ ವಿಷಯಗಳನ್ನು ಸುಲಭವಾಗಿ ಅರ್ಥೈಸಲು ಪೇಪರ್‌ಟ್ರಾನಿಕ್ಸ್ ಕಿಟ್ ರೂಪಿಸಲಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಸಿಇಒ ಸಾಯಿ ಚಂದ್ರಶೇಖರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಇಂದಿನ ಎಲ್ಲ ಕ್ಷೇತ್ರಗಳಲ್ಲೂ ಎಲೆಕ್ಟ್ರಾನಿಕ್ಸ್‌ನ ಮಹತ್ವ ಹೆಚ್ಚಾಗಿದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಎಲೆಕ್ಟ್ರಾನಿಕ್ಸ್ ಬಗ್ಗೆ ಆಸಕ್ತಿ ಮೂಡಿಸಲು 20 ಸ್ವಯಂ-ಕಲಿಕೆಯ ಚಟುವಟಿಕೆಗಳನ್ನು ಒಳಗೊಂಡ ಪೇಪರ್‌ಟ್ರಾನಿಕ್ಸ್ ಕಿಟ್ ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು ಸ್ವತಃ ಪ್ರಯೋಗಗಳನ್ನು ಮಾಡುವುದರಿಂದ ವಿಜ್ಞಾನ ವಿಷಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ ಎಂದರು.

ಪೇಪರ್‌ಟ್ರಾನಿಕ್ಸ್ ಕಿಟ್‌ನ ವಿಶೇಷತೆ

ಪೇಪರ್‌ಟ್ರಾನಿಕ್ಸ್ ಅನುಭವಾಧಾರಿತ ಎಲೆಕ್ಟ್ರಾನಿಕ್ಸ್ ಕಲಿಕಾ ಕಿಟ್ ಹಾಗೂ ಕಾರ್ಯಪುಸ್ತಕವಾಗಿದ್ದು, ಕಾಗದ ಆಧಾರಿತ ವಿನ್ಯಾಸಗಳು, ತಾಮ್ರ ಅಥವಾ ಅಲ್ಯೂಮಿನಿಯಂ ಟೇಪ್, ಎಲ್‌ಇಡಿ ದೀಪಗಳು, ಸ್ವಿಚ್‌ಗಳು, ಬ್ಯಾಟರಿಗಳು ಸೇರಿದಂತೆ ಮೂಲಭೂತ ಘಟಕಗಳನ್ನು ಬಳಸಿಕೊಂಡು ವಿದ್ಯುತ್ ವಲಯಗಳ ಪರಿಕಲ್ಪನೆಗಳನ್ನು ಸರಳ ಹಾಗೂ ಪ್ರಾಯೋಗಿಕವಾಗಿ ಕಲಿಸುತ್ತದೆ.

ವಿದ್ಯಾರ್ಥಿಗಳು ಸ್ವತಃ ವಿದ್ಯುತ್ ವಲಯಗಳನ್ನು ಜೋಡಿಸಿ, ಪರೀಕ್ಷಿಸಿ, ಫಲಿತಾಂಶಗಳನ್ನು ಗಮನಿಸಿ ಹಾಗೂ ವಿನ್ಯಾಸಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ‘ಮಾಡುತ್ತಾ ಕಲಿಯುವ’ ಅನುಭವ ಪಡೆಯುತ್ತಾರೆ.

ಕಿಟ್ ಮೂಲಕ ವಿದ್ಯುತ್ ಹರಿವು, ಸರಣಿ ಮತ್ತು ಸಮಾಂತರ ಸಂಪರ್ಕ ಸೇರಿದಂತೆ ಮೂಲಭೂತ ಎಲೆಕ್ಟ್ರಾನಿಕ್ಸ್ ಪರಿಕಲ್ಪನೆಗಳನ್ನು ನೇರ ಅನುಭವದ ಮೂಲಕ ಕಲಿಯಲು ಸಾಧ್ಯವಾಗಲಿದೆ. ಇದರೊಂದಿಗೆ ಪರಿಕಲ್ಪನಾ ತಿಳುವಳಿಕೆ, ಸಮಸ್ಯೆ ಪರಿಹಾರ ಕೌಶಲ್ಯ, ಸೃಜನಶೀಲತೆ, ನಾವೀನ್ಯತೆ, ತಾರ್ಕಿಕ ಚಿಂತನೆ ಹಾಗೂ ವಿಜ್ಞಾನ-ತಂತ್ರಜ್ಞಾನ-ಎಂಜಿನಿಯರಿಂಗ್-ಗಣಿತ ಆಧಾರಿತ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗಲಿದೆ.

ಕಾರ್ಯಪುಸ್ತಕದಲ್ಲಿ ಸರಳ, ಸರಣಿ ಹಾಗೂ ಸಮಾಂತರ ವಲಯಗಳು, ಎರಡು ಮಾರ್ಗದ ಸ್ವಿಚ್‌ಗಳು, ಸಂಚಾರ ದೀಪ, ಪೊಟೆನ್ಸಿಯೊಮೀಟರ್, ವಾಹಕ-ಅವಾಹಕ ಪರೀಕ್ಷೆ, ನೀರಿನ ಸ್ವಿಚ್, ಮನೆ ಗಂಟೆ, ವಿದ್ಯುತ್ಕಾಂತೀಯತೆ, ಚಲನೆಯಿಂದ ಕಾರ್ಯನಿರ್ವಹಿಸುವ ಎಲ್‌ಇಡಿ, ಸೌರವಲಯ, ತಾಪಮಾನ ಸಂವೇದನೆ, ಭದ್ರತಾ ಅಲಾರಂ, ಆರ್‌ಜಿಬಿ ಬೆಳಕು ಹಾಗೂ ಬಣ್ಣ ಮಿಶ್ರಣ ಸೇರಿದಂತೆ ಹಲವು ಚಟುವಟಿಕೆಗಳನ್ನು ಅಳವಡಿಸಲಾಗಿದೆ.

ಈ ಚಟುವಟಿಕೆಗಳ ಮೂಲಕ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಹೆಚ್ಚು ಆಸಕ್ತಿದಾಯಕ, ಪ್ರಾಯೋಗಿಕ ಹಾಗೂ ಅನುಭವಾಧಾರಿತವಾಗಿ ಕಲಿಯಲು ಅವಕಾಶ ದೊರೆಯಲಿದೆ.

ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ಹಾಗೂ ತಿಪ್ಪಣ್ಣಪ್ಪ ಕಮಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ನಗರ ಪೊಲೀಸ್ ಆಯುಕ್ತ ಎಸ್.ಡಿ. ಶರಣಪ್ಪ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿಡಿಪಿಐ ಶಂಕರ ಢವಳಗಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Related Articles

Leave a Reply

Your email address will not be published. Required fields are marked *

Back to top button