ಅಪರಾಧ

ಪಾಕ್ ಉಗ್ರರ ಜತೆ ನಂಟು: ಸಮೀರ್ ತೀವ್ರ ವಿಚಾರಣೆ; ಕಲಬುರಗಿಯಲ್ಲಿ ಬಂಧಿತರಿಬ್ಬರಲ್ಲಿ ಒಬ್ಬ ಬಿಡುಗಡೆ

ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ವ್ಯಕ್ತಿಗಳ ಸಂಪರ್ಕ ಆರೋಪ; ಮೊಬೈಲ್ ಪರಿಶೀಲನೆಯಲ್ಲಿ ದೇಶವಿರೋಧಿ ವಿಡಿಯೊಗಳು ಪತ್ತೆ

ಕಲಬುರಗಿ, ಆ.14: ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆಂಬ ಅನುಮಾನದ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬರದ ಹಿನ್ನೆಲೆಯಲ್ಲಿ ಒಬ್ಬನನ್ನು ಬಿಡುಗಡೆ ಮಾಡಿದ್ದು, ಮತ್ತೊಬ್ಬನಾದ ಮೊಹಮ್ಮದ್ ಸಮೀರ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೇಂದ್ರ ಗುಪ್ತಚರ ಇಲಾಖೆಯಿಂದ ಲಭ್ಯವಾದ ಮಾಹಿತಿಯ ಮೇರೆಗೆ ಉತ್ತರ ಪ್ರದೇಶದ ಆಂಟಿ ಟೆರರಿಸ್ಟ್ ಸ್ಕ್ವಾಡ್ (ಎಟಿಎಸ್) ಅಧಿಕಾರಿಗಳು ಕಲಬುರಗಿಗೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಉತ್ತರ ಪ್ರದೇಶ ಮೂಲದ ನಿವಾಸಿ ಎಂದು ತಿಳಿದುಬಂದಿರುವ ಮೊಹಮ್ಮದ್ ಸಮೀರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ವಾಟ್ಸ್‌ಆ್ಯಪ್, ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಆರೋಪ ಕೇಳಿಬಂದಿದೆ.

ಇದೇ ವೇಳೆ ಉತ್ತರ ಪ್ರದೇಶ ಮೂಲದ ಸಮೀರ್ ಮತ್ತು ಸಲ್ಮಾನ್ ಎಂಬ ಇಬ್ಬರು ಯುವಕರು ಉದ್ಯೋಗಕ್ಕಾಗಿ ಕಲಬುರಗಿ ನಗರಕ್ಕೆ ಬಂದಿದ್ದರು ಎನ್ನಲಾಗಿದೆ. ಸುಮಾರು ಎಂಟು ತಿಂಗಳಿಂದ ತಾಲೂಕಿನ ಮಾಲಗತ್ತಿ ಹಾಗೂ ಉಪಳಾಂವ್ ಗ್ರಾಮದ ಹೊರವಲಯದಲ್ಲಿರುವ ಬೀಫ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪಾಕ್ ಸಂಪರ್ಕದ ಅನುಮಾನದ ಹಿನ್ನೆಲೆಯಲ್ಲಿ ಎಟಿಎಸ್ ಅಧಿಕಾರಿಗಳು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ಸಲ್ಮಾನ್ ವಿರುದ್ಧ ಯಾವುದೇ ನಿರ್ದಿಷ್ಟ ಅನುಮಾನ ಕಂಡುಬಾರದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮೊಹಮ್ಮದ್ ಸಮೀರ್‌ನ ಮೊಬೈಲ್ ಫೋನ್‌ನ್ನು ಪೊಲೀಸರು ವಶಕ್ಕೆ ಪಡೆದು ಡಿಜಿಟಲ್ ಫೊರೆನ್ಸಿಕ್ ಪರಿಶೀಲನೆ ನಡೆಸಿದಾಗ ಭಾರತ ವಿರೋಧಿ ಪ್ರಚೋದನಾತ್ಮಕ ವಿಡಿಯೊಗಳು ಹಾಗೂ ದೇಶದ ಏಕತೆಗೆ ಧಕ್ಕೆ ತರುವಂತಹ ಕೆಲವು ವಿಡಿಯೊಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ನಕ್ಷೆಯಿಂದ ಬೇರ್ಪಡಿಸಿ ಪಾಕಿಸ್ತಾನದ ಭೂಭಾಗಕ್ಕೆ ಸೇರಿಸಿರುವ ರೀತಿಯಲ್ಲಿ ಚಿತ್ರಿಸಿರುವ ವಿಡಿಯೊಗಳೂ ಪತ್ತೆಯಾಗಿವೆ ಎನ್ನಲಾಗಿದೆ.

ಸಮೀರ್ ಪಾಕಿಸ್ತಾನ ಮೂಲದ ವ್ಯಕ್ತಿಗಳೊಂದಿಗೆ ವಾಟ್ಸ್‌ಆ್ಯಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ಮೂಲದ ಅಬೀದ್ ಜಟ್ ಹಾಗೂ ಶಹಜಾದ್ ಭಟ್ಟಿ ಎಂಬ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಆರೋಪದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ತನಿಖೆ ವೇಳೆ ಸಮೀರ್‌ನ ಮೊಬೈಲ್‌ನಲ್ಲಿ ‘ವೆಮನ್’ ಹಾಗೂ ‘ಜಟ್ 333’, ‘ರಾಣಾ ಭಾಯಿ 333’ ಸೇರಿದಂತೆ ವಿವಿಧ ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಆತ ಸಕ್ರಿಯ ಸದಸ್ಯನಾಗಿದ್ದ ಎನ್ನಲಾಗಿದ್ದು, ದೇಶವಿರೋಧಿ ಹಾಗೂ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವಂತಹ ಸಂದೇಶಗಳು ಮತ್ತು ವಿಷಯಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸಮೀರ್ ಹಲವು ಇನ್‌ಸ್ಟಾಗ್ರಾಂ ಖಾತೆಗಳನ್ನು ಹೊಂದಿದ್ದು, ಸುಮಾರು 20 ಇನ್‌ಸ್ಟಾಗ್ರಾಂ ಐಡಿಗಳನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಹಾಗೂ ಉಗ್ರ ಚಟುವಟಿಕೆಗಳಿಗೆ ವ್ಯಕ್ತಿಗಳನ್ನು ಸೆಳೆಯುವ ಕೆಲಸದಲ್ಲಿ ಭಾಗಿಯಾಗಿದ್ದಾನೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಸಮೀರ್‌ನ ಮೊಬೈಲ್‌ನಲ್ಲಿ ಪತ್ತೆಯಾದ ಕೆಲವು ನಕ್ಷೆಗಳು ಕೂಡ ತನಿಖಾಧಿಕಾರಿಗಳ ಗಮನ ಸೆಳೆದಿವೆ. ಅವುಗಳನ್ನು ಏಕೆ ಇರಿಸಲಾಗಿತ್ತು, ಅವುಗಳ ಉದ್ದೇಶವೇನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇರೆಗೆ ಮೊಹಮ್ಮದ್ ಸಮೀರ್ (23)ನನ್ನು ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಸ್ಫೋಟಕ ಹಾಗೂ ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಬೆಳಕಿಗೆ ಬಂದಿವೆ ಎಂದು ಹೇಳಲಾಗಿದೆ.

ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರೊಂದಿಗೆ ಸಂಪರ್ಕ ಹೊಂದಿರುವ ಅನುಮಾನದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಮೊಹಮ್ಮದ್ ಸಮೀರ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಉತ್ತರ ಪ್ರದೇಶ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಕೂಡ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿರುವುದರಿಂದ ಸದ್ಯ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ತನಿಖೆಯ ವೇಳೆ ಸಮೀರ್ ಉಳಿದುಕೊಂಡಿದ್ದ ಕೊಠಡಿಯಲ್ಲಿಯೂ ಕೆಲವು ನಕ್ಷೆಗಳು ಪತ್ತೆಯಾಗಿದ್ದು, ಅವುಗಳ ಉದ್ದೇಶ ಮತ್ತು ಬಳಕೆಯ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Related Articles

Leave a Reply

Your email address will not be published. Required fields are marked *

Back to top button