ಚಾಲಕನ ಸಮಯಪ್ರಜ್ಞೆ: ಅತನೂರು ಬಳಿ ತಪ್ಪಿದ ಭಾರಿ ಬಸ್ ದುರಂತ!
ಟೈರ್ ಸ್ಫೋಟಗೊಂಡರೂ ಸಮಯಪ್ರಜ್ಞೆಯಿಂದ ಬಸ್ ನಿಯಂತ್ರಿಸಿ ಪ್ರಯಾಣಿಕರ ಜೀವ ಉಳಿಸಿದ ಚಾಲಕ

ಅಫಜಲಪುರ, ಆ.14: ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ನ ಮುಂಭಾಗದ ಟೈರ್ ಏಕಾಏಕಿ ಸ್ಫೋಟಗೊಂಡರೂ ಚಾಲಕನ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ತಾಲೂಕಿನ ಅತನೂರು ಗ್ರಾಮದ ಸಮೀಪ ನಡೆದಿದೆ.
ಚಿತ್ತಾಪುರ ಸಾರಿಗೆ ಘಟಕಕ್ಕೆ ಸೇರಿದ ವಿಜಯಪುರ–ಮುಗಳಖೋಡ ಬಸ್ ಪ್ರಯಾಣಿಕರನ್ನು ಹೊತ್ತು ಅಫಜಲಪುರ ಮಾರ್ಗವಾಗಿ ಸಂಚರಿಸುತ್ತಿತ್ತು. ಅತನೂರು ಗ್ರಾಮದ ಸಮೀಪ ಬರುತ್ತಿದ್ದಂತೆ ಬಸ್ನ ಮುಂಭಾಗದ ಟೈರ್ ಭಾರಿ ಶಬ್ದದೊಂದಿಗೆ ಏಕಾಏಕಿ ಸ್ಫೋಟಗೊಂಡಿದೆ. ಟೈರ್ ಸ್ಫೋಟಗೊಂಡ ಪರಿಣಾಮ ಬಸ್ನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕಕ್ಕೆ ವಾಲಿದೆ.
ಘಟನೆಯಿಂದ ಬಸ್ನಲ್ಲಿದ್ದ ಹತ್ತಾರು ಪ್ರಯಾಣಿಕರು ಆತಂಕಗೊಂಡು ಕಿರುಚಾಡಲು ಆರಂಭಿಸಿದರು. ಆದರೆ ಟೈರ್ ಸ್ಫೋಟಗೊಂಡ ತಕ್ಷಣವೇ ಎಚ್ಚೆತ್ತ ಚಾಲಕ ಸ್ಟೀರಿಂಗ್ ಮೇಲಿನ ನಿಯಂತ್ರಣ ಸಾಧಿಸಿ, ಬ್ರೇಕ್ಗಳನ್ನು ಹಂತ ಹಂತವಾಗಿ ಪ್ರಯೋಗಿಸುವ ಮೂಲಕ ಬಸ್ನ್ನು ಸುರಕ್ಷಿತವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ್ದರೆ ಬಸ್ ಪಲ್ಟಿಯಾಗಿ ಭಾರಿ ಪ್ರಮಾಣದ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಬಸ್ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಯಲು ನೆರವಾದರು. ಬಳಿಕ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಪ್ರಯಾಣಿಕರು ಅಫಜಲಪುರ ತಲುಪಲು ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.
ಘಟನೆಯ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸಂಚರಿಸುವ ಸಾರಿಗೆ ಬಸ್ಗಳ ಫಿಟ್ನೆಸ್, ನಿರ್ವಹಣೆ ಹಾಗೂ ಹಳೆಯ ಟೈರ್ಗಳ ಬದಲಾವಣೆ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಸ್ಗಳ ತಾಂತ್ರಿಕ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಹಳೆಯ ಹಾಗೂ ಅಪಾಯಕಾರಿಯಾಗಿರುವ ಟೈರ್ಗಳನ್ನು ಕೂಡಲೇ ಬದಲಾಯಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



