ಶಿಕ್ಷಣ

ಕೇಂದ್ರ ವಿಶ್ವವಿದ್ಯಾಲಯದಲ್ಲಿ ದೃಷ್ಟಿದೋಷ ವಿದ್ಯಾರ್ಥಿಗಳಿಗೆ ವಿಶೇಷ ವೆಬ್‌ಸೈಟ್

ಗ್ರಂಥಾಲಯ ಬಳಕೆಗೆ ಹೆಚ್ಚಿನ ಸಮಯ ಮೀಸಲಿಡಿ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ, ಆ.14: ತರಗತಿಗಳಲ್ಲಿ ಕೇವಲ ವಿಷಯಜ್ಞಾನಕ್ಕೆ ಸೀಮಿತವಾಗದೆ, ಗ್ರಂಥಾಲಯಗಳಲ್ಲಿ ಲಭ್ಯವಿರುವ ಅಪಾರ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನ, ಜ್ಞಾನವೃದ್ಧಿ, ಶೈಕ್ಷಣಿಕ ಪ್ರಗತಿ ಹಾಗೂ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಗ್ರಂಥಾಲಯ ಬಳಕೆಗೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದು ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.

ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್. ರಂಗನಾಥ ಅವರ 134ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ 100 ಆಸನಗಳ ಆಧುನಿಕ ತಂತ್ರಜ್ಞಾನ ಹೊಂದಿದ ‘ಜ್ಞಾನ ಸೇತು’ ತರಬೇತಿ ಕೇಂದ್ರ ಹಾಗೂ ದೃಷ್ಟಿದೋಷ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ವೆಬ್‌ಸೈಟ್‌ ಅನಾವರಣಗೊಳಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ–ಒಂದು ಚಂದಾದಾರಿಕೆ’ ಯೋಜನೆಯಡಿ 30ಕ್ಕೂ ಹೆಚ್ಚು ಪ್ರಕಾಶಕರ 13 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರೀಯ ಜರ್ನಲ್‌ಗಳು ಲಭ್ಯವಿವೆ. ಇ-ಗ್ರಂಥಾಲಯ ಸಂಪನ್ಮೂಲ, ವೈ-ಫೈ, ಕೃತಿಚೌರ್ಯ ಪತ್ತೆ ಸಾಧನ, ವ್ಯಾಕರಣ ಸುಧಾರಣಾ ಪರಿಕರ ಸೇರಿದಂತೆ ಹಲವು ಡಿಜಿಟಲ್ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜೀವವಿಜ್ಞಾನ ನಿಕಾಯದ ಡೀನ್ ಪ್ರೊ. ಎನ್. ಸತ್ಯನಾರಾಯಣ ಮಾತನಾಡಿ, ಪದ್ಮಶ್ರೀ ಡಾ. ಎಸ್.ಆರ್. ರಂಗನಾಥ ಅವರು ಗ್ರಂಥಾಲಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಹನೀಯರು. ಅವರ ಜಯಂತಿಯ ಅಂಗವಾಗಿ 100 ಆಸನಗಳ ಆಧುನಿಕ ‘ಜ್ಞಾನ ಸೇತು’ ಕೇಂದ್ರ ಹಾಗೂ ವಿಶೇಷ ವೆಬ್‌ಸೈಟ್‌ ಅನಾವರಣಗೊಳಿಸಿರುವುದು ಕೇವಲ ದಿನಾಚರಣೆಗೆ ಸೀಮಿತವಾಗದೆ, ಅವರ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದಿರುವ ಮಹತ್ವದ ಸಾಧನೆಯಾಗಿದೆ ಎಂದು ಹೇಳಿದರು.

ಕೇಂದ್ರ ಗ್ರಂಥಾಲಯದ ಮುಖ್ಯಸ್ಥ ಡಾ. ಪಿ.ಎಸ್. ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಶೈಕ್ಷಣಿಕ ಜೀವನದ ಹೃದಯಭಾಗವೇ ಗ್ರಂಥಾಲಯ. ಗ್ರಂಥಾಲಯದ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸುತ್ತಿರುವ ಕುಲಪತಿಗಳಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ‘ಜ್ಞಾನ ಸೇತು’ ಕೇಂದ್ರ ಹಾಗೂ ನೂತನ ವೆಬ್‌ಸೈಟ್‌ನ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸ್ಕೋಪಸ್ ಸೂಚ್ಯಂಕದಲ್ಲಿ ಅತ್ಯುತ್ತಮ ಗುಣಮಟ್ಟದ ಹೆಚ್ಚಿನ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಶೇಷನಾಥ ಭೋಸಲೆ, ಸ್ಕೋಪಸ್‌ನಲ್ಲಿ ಉತ್ತಮ ಗುಣಮಟ್ಟದ ಸಂಶೋಧನಾ ಲೇಖನಗಳಿಗೆ ಹೆಚ್ಚಿನ ಉಲ್ಲೇಖ ಪಡೆದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎನ್. ಸಂದೀಪ್, ಉತ್ತಮ ಬಳಕೆಯ ವ್ಯವಹಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಶೈಲಜಾ ಎಸ್. ಕೋನೇಕ್ ಹಾಗೂ ಅನೀಲರಾವ್ ಕಾಂಬಳೆ ಸೇರಿದಂತೆ ಹೆಚ್ಚಿನ ಬಳಕೆ ಹಾಗೂ ಪ್ರಕಟಣೆ ಮಾಡಿದ ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಯುಜಿಸಿ ಮತ್ತು ಪಿಜಿ ವಿದ್ಯಾರ್ಥಿಗಳನ್ನು ಗ್ರಂಥಾಲಯದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ರಾಜಕುಮಾರ್ ಕಲ್ಯಾಣಿ ನಿರೂಪಿಸಿದರು. ಪ್ರಕಾಶ್ ಎಸ್.ಎನ್. ವಂದಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು. ಉಪ ಗ್ರಂಥಪಾಲಕರಾದ ಡಾ. ಸತೀಶ್ ತೋಡರ್, ಡಾ. ದೀಕ್ಷಿತ್, ಸಿಬ್ಬಂದಿಗಳಾದ ರಾಜೇಶ್ ದಾಸ್, ಬಸವರಾಜ ಯಾದವಾಡ, ನಿಂಗಣ್ಣ, ಸಾಗರ ಕಡಬೆ, ಸತೀಶ್ ಕುಮಾರ್, ಶಿವಕುಮಾರ್ ಸೇರಿದಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button