ಜಾತಿ ಜನಗಣತಿಯ ಹೆಸರಿನಲ್ಲಿ ಓಟಿನ ರಾಜಕೀಯ: ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಮೋದ್ ಮಧ್ವರಾಜ್ ಕಿಡಿ..!

ಕಲಬುರ್ಗಿ, ಜು.೮- ಕರ್ನಾಟಕ ಸರ್ಕಾರ ಜಾತಿ ಜನಗಣತಿಯ ಹೆಸರಿನಲ್ಲಿ ಓಟಿನ ರಾಜಕೀಯ ಬಿಟ್ಟರೆ ಮತ್ತೇನು ಮಾಡಿಲ್ಲ. ಕೇಂದ್ರ ಸರ್ಕಾರವೇ ಅಧಿಕೃತವಾಗಿ ಜಾತಿ ಜನಗಣತಿಯ ಸಿದ್ಧತೆ, ಪ್ರಕ್ರಿಯೆ ಆರಂಭಿಸಿದ್ದು, ಆಮೂಲಕವೇ ಕರ್ನಾಟಕದ ಜನತೆ ಸಾಮಾಜಿಕ ನ್ಯಾಯ ಪಡೆದುಕೊಳ್ಳಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಬದ್ಧತೆಯ ರಾಜಕಾರಣದ ಕೊರತೆಯಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಿದೆ. ಜಾತಿ ಜನಗಣತಿಯ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.
೨೦೧೩ರಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗೆ ಹಾಕಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ಧರಾಮಯ್ಯನವರು ಜಾತಿ ಜನಗಣತಿಯ ವಿಷಯದಲ್ಲಿ ಬರೀ ಮಾತಿನ ಶೂರರಾದರು, ಒಬಿಸಿ ಸಮುದಾಯಗಳ ಅಶೋತ್ತರಗಳಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗದಂತೆ ಮಾಡಿದರು. ೬೦೦ ಕೋಟಿ ರೂ,ಗಳ ತೆರಿಗೆ ಹಣ ಮುಳುಗಿಸಿ ಕೈತೊಳೆದುಕೊಂಡಿ ದ್ದಾರೆ.
೨೦೧೪ರಲ್ಲಿ ಕಾಂತರಾಜ್ ಆಯೋಗಕ್ಕೆ ಜಾತಿ ಜನಗಣತಿ ಜವಾಬ್ದಾರಿ ಕೊಡಲಾಯಿತು. ಆನಂತರ ಜಯಪ್ರಕಾಶ್ ಹೆಗ್ಡೆ ಆಯೋಗಕ್ಕೆ ವಹಿಸಲಾಯಿತು. ಕೊನೆಗೆ ೧೦ ವರ್ಷದ ನಂತರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನ ಜಾತಿ ಜನಗಣತಿಯ ವರದಿ ಮೂಲೆ ಸೇರಿತು ಎಂದು ಅವರು ಆಕ್ರೋಶ ಹೊರಹಾಕಿದರು.
ಬಿಹಾರದ ನಿತೀಶ್ ಕುಮಾರ್, ತೆಲಂಗಾಣದ ರೇವಂತ ರೆಡ್ಡಿ ಅವರು ಒಂದು ವರ್ಷದ ಕಾಲಮಿತಿಯಲ್ಲಿ ಮಾಡಿ ಮುಗಿಸಿದ ಕೆಲಸವನ್ನು, ಸಿದ್ಧರಾಮಯ್ಯನವರು ೧೦ ವರ್ಷ ಕಾಲಹರಣ ಮಾಡಿ ಒಬಿಸಿ ಸಮುದಾಯಗಳನ್ನು ದಿಕ್ಕು ತಪ್ಪಿಸಿದ್ದಾರೆ ಎಂದು ರೋಪಿಸಿದ ಅವರು, ಕಳೆದ ವರ್ಷ ಸಿದ್ಧರಾಮಯ್ಯನವರು ಮತ್ತೊಂದು ಜಾತಿಗಣತಿಗೆ ಮುಂದಾದರು ಜೂನ್ ೧೫ ೨೦೨೫ರಂದು ಸಚಿವ ಸಂಪುಟ ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಮತ್ತೊಂದು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಘೋಷಿಸಿದರು. ತಂತ್ರಜ್ಞಾನ ಬಳಸಿ ಸಮೀಕ್ಷೆ ಮಾಡಲಾಗುತ್ತಿದ್ದು ಮೂರೇ ತಿಂಗಳಲ್ಲಿ ವರದಿ ಸಿದ್ದವಾಗುತ್ತದೆ ಎಂದು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದರು ಎಂದು ಅವರು ಹೇಳಿದರು.
೩ ತಿಂಗಳಲ್ಲ, ೬ ತಿಂಗಳಲ್ಲ ಒಂದು ವರ್ಷವಾದರೂ ಜಾತಿ ಜನಗಣತಿ ಪ್ರಕ್ರಿಯೆ ಮುಗಿಯುತ್ತಿಲ್ಲ. ಸಮೀಕ್ಷೆ ಶುರುವಾದದ್ದೆ ಸೆಪ್ಟೆಂಬರ್ ೨೨ಕ್ಕೆ. ಆಗಲೇ ಮೊದಲ ಮೂರು ತಿಂಗಳು ಮುಗಿದಿತ್ತು. ನವಂಬರ್ ೧೦ಕ್ಕೆ ಸಮೀಕ್ಷೆ ಮುಗಿದರೂ ಆರು ತಿಂಗಳಾದರೂ ಸಮೀಕ್ಷೆಯ ವರದಿ ಪೂರ್ತಿಯಾಗಿರಲಿಲ್ಲ. ಮೇ ೨೬ಕ್ಕೆ ಸಿದ್ಧರಾಮಯ್ಯನವರಿಗೆ ರಾಜೀನಾಮೆ ಕೊಡಲು ಕಾಂಗ್ರೆಸ್ ಹೈಕಮಾಂಡ್ ಆದೇಶಿಸಿತು . ಮರುದಿನ ಮೇ ೨೭ರಂದು ಸಿದ್ಧರಾಮಯ್ಯ ತರಾತುರಿಯಲ್ಲಿ ವರದಿ ಸ್ವೀಕರಿಸಿದ ಶಾಸ್ತ್ರ ಮಾಡಿದರು. ಬದ್ಧತೆ ಇದ್ದಿದ್ದರೆ ಆಯೋಗ ಚುರುಕಾಗಿ ಕಾರ್ಯ ನಿರ್ವಹಿಸುವಂತೆ ಮಾಡಿ, ಶಿಫಾರಸ್ಸುಗಳನ್ನು ಜಾರಿಗೆ ತರಲು ಮುಂದಾಗಬೇಕಿತ್ತಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಪತ್ರಿಕೆಗಳಲ್ಲಿ ಸೋರಿದ ವರದಿಗಳು ಬಂದವು . ಜೂನ್ ೧೬ರಂದು ಜಾತಿ ಜನಗಣತಿಯ ವಿಷಯ ಹೈಕೋರ್ಟ್ ಮೆಟ್ಟಿಲು ಏರಿದೆ. ಈಗ ಆಗಸ್ಟ್ ೨೦ಕ್ಕೆ ಪ್ರಕರಣ ಮುಂದೆ ಹೋಗಿದೆ. ಕರ್ನಾಟಕ ಸರ್ಕಾರ ಕಾನೂನು ಹೋರಾಟದಲ್ಲಿಯೂ ಸರಿಯಾದ ಸಿದ್ಧತೆ ಮಾಡದೆ ವಿಫಲವಾಗಿದೆ. ಹೊಸ ಮುಖ್ಯಮಂತ್ರಿಗಳು ಜಾತಿ ಜನಗಣತಿಯ ಬಗ್ಗೆ ಒಂದು ಶಬ್ದವನ್ನು ಮಾತನಾಡುತ್ತಿಲ್ಲ. ಕಾಂಗ್ರೆಸ್ಸಿನಲ್ಲಿರುವ ಹಿಂದುಳಿದ ವರ್ಗಗಳ ನಾಯಕರಿಗೆ ಮಂತ್ರಿ ಸ್ಥಾನ, ಖಾತೆಗಳದ್ದೆ ಚಿಂತೆಯಾಗಿದೆ ಎಂದು ಅವರು ಟೀಕಿಸಿದರು.
ಫೆಬ್ರವರಿ ತಿಂಗಳ ರಾಜ್ಯಪಾಲರ ಭಾಷಣದಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಒಂದು ಸಾಲೂ ಇರಲಿಲ್ಲ, ಮುಖ್ಯಮಂತ್ರಿಗಳ ಬಜೆಟ್ ಭಾಷಣದಲ್ಲಿಯೂ ಉಲ್ಲೇಖವಿಲ್ಲ. ಸರ್ಕಾರದ ನಿರ್ಲಕ್ಷ್ಯತೆಗೆ ಮತ್ಯಾವ ಸಾಕ್ಷಿ ಬೇಕು?, ಕರ್ನಾಟಕ ಸರ್ಕಾರ ಜಾತಿ ಜನಗಣತಿಯ ಹೆಸರಿನಲ್ಲಿ ಓಟಿನ ರಾಜಕೀಯ ಬಿಟ್ಟರೆ ಮತ್ತೇನು ಮಾಡಿಲ್ಲ. ಕೇಂದ್ರ ಸರ್ಕಾರವೇ ಅಧಿಕೃತವಾಗಿ ಜಾತಿ ಜನಗಣತಿಯ ಸಿದ್ಧತೆ, ಪ್ರಕ್ರಿಯೆ ಆರಂಭಿಸಿದ್ದು, ಆಮೂಲಕವೇ ಕರ್ನಾಟಕದ ಜನತೆ ಸಾಮಾಜಿಕ ನ್ಯಾಯ ಪಡೆದುಕೊಳ್ಳಬೇಕಾಗಿದೆ. ಕರ್ನಾಟಕದ ಜನತೆ ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗಗಳು ರೋಸಿ ಹೋಗಿ ರೊಚ್ಚಿಗೆದ್ದು ಬೀದಿಗಿಳಿಯುವ ದಿನ ದೂರವಿಲ್ಲ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ್, ಸುಭಾಷ ಗುತ್ತೇದಾರ್, ರೇವಣಸಿದ್ದಪ್ಪ ಸಂಕಾಲಿ, ವೆಂಕಟೇಶ್ವರಪ್ಪ, ಬಸವರಾಜ್ ಸಪ್ಪಣಗೋಳ್, ಲಿಂಗರಾಜ್ ಬಿರಾದಾರ್, ವಿದ್ಯಾಧರ್ ಮಂಗಳೂರೆ, ನಿಂಗಣ್ಣ ಹುಳಗೂಳಕರ್, ದೇವಿಂದ್ರ ಮುತ್ತಕೋಡ್, ಶರಣಗೌಡ ಪಾಟೀಲ್, ಬಸವರಾಜ್ ಗುಂಡಲಗೇರಿ ಮುಂತಾದವರು ಉಪಸ್ಥಿತರಿದ್ದರು.



